ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯವೇ ಹೊರತು ಸಚಿವ ಸ್ಥಾನವಲ್ಲ: ಸಿಂಹ
ಮೈಸೂರು

ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯವೇ ಹೊರತು ಸಚಿವ ಸ್ಥಾನವಲ್ಲ: ಸಿಂಹ

May 29, 2019

ಮೈಸೂರು: ಮುಂದಿನ ತಮ್ಮ ಐದು ವರ್ಷಗಳ ಅವಧಿಯಲ್ಲಿ ಮೈಸೂರು-ಬೆಂಗಳೂರು ರೈಲ್ವೆ ಮಾರ್ಗದ ವಿದ್ಯುದ್ದೀಕರಣ, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ, ಮೈಸೂರು-ಮಡಿಕೇರಿ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತಿ ಸುವುದು, ರಿಂಗ್ ರಸ್ತೆ ಅಭಿವೃದ್ಧಿ, ನಾಗನಹಳ್ಳಿ ಸ್ಯಾಟಲೈಟ್ ಸ್ಟೇಷನ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೆತ್ತಿ ಕೊಳ್ಳುವುದಾಗಿ ಸಂಸದ ಪ್ರತಾಪಸಿಂಹ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿ, ಕಳೆದ ಅವಧಿಯಲ್ಲಿ ತಾವು ಮೈಸೂರಿನಿಂದ ಹಲವು ರಾಜ್ಯಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದು, ಮುಂದೆಯೂ ಇನ್ನಷ್ಟು ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಚಿಂತಿಸಿರುವುದಾಗಿ ತಿಳಿಸಿದರು. ಒಟ್ಟಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರವಾಸೋದ್ಯಮ ಮತ್ತು ಪಾರಂಪರಿಕ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮದಲ್ಲಿ ಹೆಚ್ಚು ಉದ್ಯೋಗಾವಕಾಶ ಮತ್ತು ಮೈಸೂರು-ಕುಶಾಲನಗರ ರೈಲು ಮಾರ್ಗದ ಶೀಘ್ರ ಕಾಮಗಾರಿಗೆ ಶ್ರಮಿಸಲಿರುವುದಾಗಿ ಹೇಳಿದರು. ಕೇಂದ್ರ ಸಚಿವ ಸ್ಥಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ಸಚಿವ ಸ್ಥಾನವಲ್ಲ. ಸಚಿವನಾಗ ಬೇಕೆಂಬ ಬಗ್ಗೆ ಆಸಕ್ತಿಯೂ ಇಲ್ಲ ಎಂದರು. ಚಾಮರಾಜನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷದ ಹಿರಿಯರೂ ಆದ ದಲಿತರ ಧ್ವನಿ ವಿ.ಶ್ರೀನಿವಾಸ ಪ್ರಸಾದ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾದರೆ ಸಂತೋಷ ಪಡುವವರಲ್ಲಿ ನಾನೇ ಮೊದಲಿಗನಾಗುತ್ತೇನೆ ಎಂದು ಹೇಳಿದರು.

ಪರಿಶಿಷ್ಟ ವರ್ಗಕ್ಕೆ ಪರಿವಾರ-ತಳವಾರ: ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿವಾರ-ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರದಲ್ಲಿ ತಾವು ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದು, ಮುಂದೆ ಅದನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಯಾಗುವವರೆಗೂ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಿದ್ದರಾಮಯ್ಯರ ಆಶೀರ್ವಾದ ನನ್ನ ಮೇಲಿರಲಿ: 5 ವರ್ಷದ ಅವಧಿಯಲ್ಲಿ ಪ್ರತಾಪಸಿಂಹ ಸಣ್ಣ ಕೆಲಸವನ್ನೂ ಮಾಡಿಲ್ಲ ಎಂಬ ಸಿದ್ದರಾಮಯ್ಯ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ಮುಂದಿಟ್ಟರು. ಮೈಸೂರು ಪಾಸ್‍ಪೋರ್ಟ್ ಸೇವಾ ಕೇಂದ್ರ, ಮೈಸೂರು ವಿಮಾನ ನಿಲ್ಧಾಣದ ಅಭಿವೃದ್ಧಿ, ನೂತನ ಜಿಲ್ಲಾಧಿಕಾರಿ ಕಚೇರಿಗೆ ಭೂಮಿ ಕೊಡಿಸಿದ್ದು, ರೈಲ್ವೆ ಮತ್ತು ರಸ್ತೆಗಳ ಯೋಜನೆಗಳನ್ನು ವಿವರಿಸಿದರು. ಇವೆಲ್ಲವೂ ನಾನು ಮಾಡಿಲ್ಲವೇ? ಇವೆಲ್ಲವೂ ಸಿದ್ದರಾಮಯ್ಯರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಆದಾಗ್ಯೂ ಹಿರಿಯರಾದ ಸಿದ್ದರಾಮಯ್ಯ ಅವರ ಆಶೀರ್ವಾದ ನನ್ನ ಮೇಲಿರಲಿ ಎಂದು ತಿಳಿಸಿದರು.

Translate »