ಗ್ರಾಪಂ ಚುನಾವಣೆಗೆ ಮೈಲ್ಯಾಕ್‍ನಿಂದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿ
ಮೈಸೂರು

ಗ್ರಾಪಂ ಚುನಾವಣೆಗೆ ಮೈಲ್ಯಾಕ್‍ನಿಂದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿ

December 9, 2020

ಮೈಸೂರು, ಡಿ.8(ಎಂಟಿವೈ)- ರಾಜ್ಯದಲ್ಲಿ 2 ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಳಸಲು ಚುನಾವಣಾ ಆಯೋಗವು `ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ’(ಮೈಲ್ಯಾಕ್)ಯಿಂದ 1.15 ಕೋಟಿ ರೂ. ಮೌಲ್ಯದ 99 ಸಾವಿರ ಬಾಟಲ್ ಅಳಿಸಲಾಗದ ಶಾಯಿ ಹಾಗೂ 6580 ಪ್ಯಾಕ್ ಸೀಲಿಂಗ್ ವ್ಯಾಕ್ಸ್ ಪೂರೈಸುವಂತೆ ಬೇಡಿಕೆ ಇಟ್ಟಿದೆ ಎಂದು ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ತಿಳಿಸಿದ್ದಾರೆ.

ಕಾರ್ಖಾನೆ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಹಾರಾಜರ ಕಾಲದಲ್ಲಿ ಸ್ಥಾಪಿತವಾದ `ಮೈಲ್ಯಾಕ್’ ಈವರೆಗೂ ತನ್ನದೇ ಆದ ಮಹತ್ವ ಹಾಗೂ ಗುಣಮಟ್ಟ ಕಾಯ್ದುಕೊಂಡಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವ ಹಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದವರೆಲ್ಲಾ ಸಂಸ್ಥೆಯ ಹೆಸರು ಉಳಿಸುವ ಕೆಲಸ ಮಾಡಿದ್ದಾರೆ. ಮೈಲ್ಯಾಕ್ ಯಶಸ್ಸಿನ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಕೀರ್ತಿ ಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಹೇಳಿದರು.

ಗ್ರಾಪಂ ಚುನಾವಣೆಯಲ್ಲಿ ಬಳಸಲು ಚುನಾವಣಾ ಆಯೋಗ 5 ಎಂಎಲ್ ಸಾಮಥ್ರ್ಯದ 99 ಸಾವಿರ ಬಾಟಲ್ ಅಳಿಸಲಾಗದ ಶಾಯಿ ಹಾಗೂ 6580 ಪ್ಯಾಕ್ ಸೀಲಿಂಗ್ ವ್ಯಾಕ್ಸ್‍ಗೆ ಬೇಡಿಕೆ ಸಲ್ಲಿಸಿದೆ. ಇದರಿಂದ ಮೈಲ್ಯಾಕ್ 1.15 ಕೋಟಿ ರೂ. ವಹಿವಾಟು ನಡೆಸಿದಂತಾಗಲಿದೆ. ಚುನಾ ವಣಾ ಆಯೋಗದ ಬೇಡಿಕೆಗನುಸಾರ ಶಾಯಿ ತಯಾ ರಿಸಿ ರವಾನಿಸುವ ಕಾರ್ಯದಲ್ಲಿ ಸಂಸ್ಥೆ ಮಗ್ನವಾಗಿದೆ. ಆಯೋಗ ಸೂಚಿಸಿದ ಸಮಯಕ್ಕೂ ಮುನ್ನವೇ ಶಾಯಿ ಪೂರೈಸಲು ಸಂಸ್ಥೆ ಬದ್ಧವಾಗಿದೆ ಎಂದರು.

21.52 ಕೋಟಿ ರೂ. ವಹಿವಾಟು: ಮೈಲ್ಯಾಕ್ ಸಂಸ್ಥೆ 2019-20ನೇ ಸಾಲಿನಲ್ಲಿ 21.52 ಕೋಟಿ ರೂ. ವಹಿವಾಟು ನಡೆಸಿದೆ. ಅದರಲ್ಲಿ 4.59 ಕೋಟಿ ರೂ. ಪೇಯಿಂಟ್ಸ್(ಬಣ್ಣ) ಮಾರಾಟದಿಂದ, 16.93 ಕೋಟಿ ರೂ. ಅಳಿಸಲಾಗದ ಶಾಯಿ ಪೂರೈಕೆ ಯಿಂದ ಬಂದಿದೆ. ಈ ಸಾಲಿನ ವಹಿವಾಟಿನಲ್ಲಿ ತೆರಿಗೆ ಪಾವತಿಗೂ ಮುನ್ನ ಸಂಸ್ಥೆ 4.70 ಕೋಟಿ ರೂ. ಲಾಭ ಗಳಿಸಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ವರ್ಷ 20 ಕೋಟಿ ಗುರಿ: ಕಳೆದ ಸಾಲಿನಲ್ಲಿ ಮೈಲ್ಯಾಕ್ ನಿಂದ 2.17 ಕೋಟಿ ರೂ. ಮೌಲ್ಯದ ಶಾಯಿ ರಫ್ತು ಮಾಡ ಲಾಗಿದೆ. ನವೆಂಬರ್ ಮಾಸಾಂತ್ಯಕ್ಕೆ 12.25 ಕೋಟಿ ರೂ ವಹಿವಾಟು ನಡೆದಿದೆ. ಈ ವರ್ಷ 20 ಕೋಟಿ ರೂ. ವಹಿ ವಾಟು ನಡೆಸುವ ಗುರಿ ಇದೆ. ಇತ್ತೀಚೆಗೆ ಕರ್ನಾಟಕ, ಮಹಾ ರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ,
ಬಿಹಾರ, ತೆಲಂಗಾಣ, ಉತ್ತರಪ್ರದೇಶದಲ್ಲಿ ಮೇಲ್ಮನೆಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲೂ ಮೈಲ್ಯಾಕ್ ಶಾಯಿ ಪೂರೈಸಿದೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ರಾಜ್ಯಗಳಲ್ಲಿನ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗೂ ಇದೇ ಶಾಯಿ ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಹಿವಾಟು ನಿರೀಕ್ಷೆ ಇದೆ ಎಂದರು.

20.57 ಲಕ್ಷ ರೂ. ವಿನಿಯೋಗ: ಪ್ರತಿವರ್ಷ ಸಂಸ್ಥೆ ಗಳಿಸಿದ ಲಾಭದಲ್ಲಿ ಕಾರ್ಪೋ ರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ(ಸಿಎಸ್‍ಆರ್) ಫಂಡ್‍ನಲ್ಲಿ ವಿವಿಧ ಸಮಾಜ ಸೇವಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗೆ ಕಟ್ಟಡ, ವಿದ್ಯಾರ್ಥಿನಿಲಯ, ಅನಾಥಾಲಯಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು 20.57 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

ಹೊಸ ಯೋಜನೆ: ಮೈಲ್ಯಾಕ್ ಅಭಿವೃದ್ಧಿ ಹಾಗೂ ಸಂಸ್ಥೆಯ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆಗೆ ಅಗತ್ಯವಾದ ನೂತನ ಯಂತ್ರೋಪಕರಣ ಶೀಘ್ರ ಅಳವಡಿಸಲಾಗುವುದು. ಅಲ್ಲದೆ ಪೇಂಟ್ ಘಟಕ ಸ್ಥಾಪನೆ ಚಿಂತನೆ ಇದೆ. ನೆರೆ ರಾಜ್ಯಗಳ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಮೈಲ್ಯಾಕ್ ಶಾಯಿ ಬಳಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಶಾಯಿಗೆ ಬದಲಾಗಿ ಸ್ಥಳೀಯವಾಗಿ ಲಭ್ಯವಿರುವ ಶಾಯಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಲ್ಯಾಕ್ ಮಾರುಕಟ್ಟೆ ವಿಭಾಗದ ಅಧಿಕಾರಿಗಳ ತಂಡವನ್ನು ನೆರೆ ರಾಜ್ಯಗಳಿಗೆ ಕಳುಹಿಸಿ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಮೈಲ್ಯಾಕ್ ಶಾಯಿಯನ್ನೇ ಬಳಸುವಂತೆ ಕೋರಲಾಗುವುದು. ಸಂಸ್ಥೆಯಲ್ಲಿ 90 ಮಂದಿ ಖಾಯಂ ನೌಕರರಿದ್ದು, ಅಗತ್ಯವಿದ್ದಾಗ 50 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೈಲ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »