ಗೆದ್ದ ಬಳಿಕ ತಿರುಗಿ ನೋಡದ ಗ್ರಾಪಂ ಸದಸ್ಯರು; ಹಳೇಬೀಡು ಗ್ರಾಮದ ಮಹಿಳೆಯರ ಆಕ್ರೋಶ
ಮೈಸೂರು

ಗೆದ್ದ ಬಳಿಕ ತಿರುಗಿ ನೋಡದ ಗ್ರಾಪಂ ಸದಸ್ಯರು; ಹಳೇಬೀಡು ಗ್ರಾಮದ ಮಹಿಳೆಯರ ಆಕ್ರೋಶ

December 22, 2020

ಮೈಸೂರು,ಡಿ.21(ವೈಡಿಎಸ್)-ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡವರ ಮನೆಗಳು ಮುರಿದು ಬೀಳು ತ್ತಿವೆ… ಕುಡಿಯುವ ನೀರಿಗೂ ಹಾಹಾಕಾರವಿದೆ… ಗೆದ್ದ ಅಭ್ಯರ್ಥಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಸ್ವಂತ ಸಮಸ್ಯೆಗಳನ್ನಷ್ಟೇ ಪರಿಹರಿಸಿಕೊಳ್ಳುತ್ತಾರೆ. ಇದಕ್ಕಾಗಿ ನಾವೇಕೆ ಮತ ನೀಡಬೇಕು?

ಇದು ಹಳೇಬೀಡು ಗ್ರಾಮದ ಮಹಿಳೆಯರ ಪ್ರಶ್ನೆ.

ಹಳೆಬೀಡಿನಲ್ಲಿ ತುಂಬಾ ಜನರ ಮನೆಗಳು ಕುಸಿದು ಬೀಳುವಂತಿವೆ. ಮಳೆಗಾಲದಲ್ಲಿ ನೀರೆಲ್ಲಾ ಮನೆಯೊಳಗೆ ಸುರಿ ಯುತ್ತದೆ. ಮಳೆ ನಿಂತ ನಂತರ ಕುಟುಂಬದವರೆಲ್ಲಾ ನೀರು ಹೊರಹಾಕುತ್ತಾರೆ. ಗೆದ್ದ ಅಭ್ಯರ್ಥಿಗಳು ಮನೆ ಇಲ್ಲದವರು, ಮುರುಕು ಮನೆಗಳಲ್ಲಿ ಇರುವವರಿಗೆ ಮನೆ ನೀಡದೇ, ಇದ್ದವರಿಗೆ ಮನೆ ನೀಡುತ್ತಿದ್ದಾರೆ. ಅವರಿಗೆ ಬೇಕಾದವರ ಕೆಲಸಗಳನ್ನಷ್ಟೇ ಮಾಡಿಕೊಡುತ್ತಾರೆ. ಅವರು ಮಾತ್ರಾನಾ ಓಟ್ ಹಾಕಿರೋದು? ನಾವೇನು ಹಾಕಿಲ್ವ? ಎಂದು ಮಹಿಳೆಯರು ಪ್ರಶ್ನಿಸಿದರು.

ನೀರಿಗೂ ತೊಂದರೆ: ಗ್ರಾಪಂ ಇದ್ದರೂ ಕುಡಿಯುವ ನೀರಿಗೆ ತೊಂದರೆ. 3-4 ದಿನಗಳಿಗೊಮ್ಮೆ ಮನಸ್ಸಿಗೆ ಬಂದಂತೆ ನೀರು ಬಿಡುತ್ತಾರೆ. ಕೂಲಿ ಕೆಲಸ ಮಾಡುವ ನಾವು ನೀರಿಗೆ ಕಾಯುತ್ತಾ ಮನೆಯಲ್ಲೇ ಕುಳಿತರೆ ಜೀವನ ನಡೆಸುವುದು ಹೇಗೆ? ಮತಯಾಚನೆ ವೇಳೆ ನಾನು ಗೆದ್ದರೆ ಹಾಗೆ ಮಾಡ್ತೀನಿ. ಹೀಗ್ ಮಾಡ್ತೀನಿ ಎನ್ನುವ ಅಭ್ಯರ್ಥಿಗಳು, ಗೆದ್ದ ನಂತರ ಯಾವುದನ್ನು ಈಡೇರಿಸಲ್ಲ. ಮತ ಯಾಚಿಸಲು ನಮ್ಮ ಮನೆ ಬಾಗಿಲಿಗೆ ಬಂದ ಅಭ್ಯರ್ಥಿಗಳು ಗೆದ್ದ ನಂತರ ಸಮಸ್ಯೆ ಗಳನ್ನು ಹೇಳಿಕೊಳ್ಳಲು ನಾವೇ ಅವರ ಮನೆಗೆ ಅಲೆಯ ಬೇಕು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಸೂಕ್ಷ್ಮ ಪ್ರದೇಶ: ಕಳೆದ ಬಾರಿಯ ಗ್ರಾಪಂ ಅಧ್ಯಕ್ಷ, ಉಪಾ ಧ್ಯಕ್ಷರ ಚುನಾವಣೆಯಲ್ಲಿ ಗಲಾಟೆ ನಡೆದ ಹಿನ್ನೆಲೆ ಹಳೇ ಬೀಡನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಚುನಾ ವಣಾ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳು ಯಾವುದೇ ಗಲಾಟೆ-ಘರ್ಷಣೆಗಳಿಲ್ಲದೆ ಶಾಂತಚಿತ್ತದಿಂದ ಮತಯಾಚಿಸುತ್ತಿದ್ದಾರೆ ಎಂದು ರಾಘವೇಂದ್ರ ಹೇಳಿದರು.

ನಾಮಪತ್ರ ವಾಪಸ್: ಗ್ರಾಮದ ಶಿವರಾಜ್ ಮಾತನಾಡಿ, ನಾನು 3ನೇ ಬಾರಿಗೆ ಸ್ಪರ್ಧಿಸಿದ್ದೆ. ಆದರೆ, ಯುವಕನೋರ್ವ ಸ್ಪರ್ಧಿಸುತ್ತೇನೆಂದು ಮನವಿ ಮಾಡಿದ. ಯುವಕರಿಗೆ ಅವಕಾಶ ನೀಡೋಣವೆಂದು ನಾಮಪತ್ರ ವಾಪಸ್ ಪಡೆದೆ ಎಂದರು.

ವೀರೇಶ್ ಮಾತನಾಡಿ, ಕಳೆದ ಬಾರಿ ನಾನು ಸ್ಪರ್ಧಿಸಿದ್ದೆ. ಈ ಬಾರಿ ಪತ್ನಿ ಸ್ಪರ್ಧೆಗಿಳಿದಿದ್ದರು. ಆದರೆ, ಡಿಇಡಿ ವ್ಯಾಸಂಗ ಮಾಡಿದ ಯುವತಿಯೊಬ್ಬಳು ಸ್ಫರ್ಧಿಸುತ್ತೇನೆಂದು ಹೇಳಿದಳು. ಓದಿಕೊಂಡವರಿಗೆ ಅವಕಾಶ ನೀಡೋಣ ಎಂದು ನಾಮಪತ್ರ ವಾಪಸ್ ಪಡೆದೆ. ಯಾರೇ ಗೆಲ್ಲಲಿ ಗ್ರಾಮದ, ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಹೇಳಿದರು.

ಉಮೇದುವಾರಿಕೆ: ಹಳೇಬೀಡು ಗ್ರಾಪಂ ವ್ಯಾಪ್ತಿಗೆ ಮೂಡಲಕೊಪ್ಪಲು, ಬೆಟ್ಟದೂರು, ಮೈದನಹಳ್ಳಿ, ಬೂಚನಹಳ್ಳಿ, ಸಬ್ಬನಹಳ್ಳಿ, ಹಳ್ಳದಕಲ್ಲಹಳ್ಳಿ, ವಡ್ಡರಹಳ್ಳಿ ಗ್ರಾಮಗಳು ಸೇರಿವೆ. 12 ಸ್ಥಾನಗಳಿಗೆ ಒಟ್ಟು 31 ಮಂದಿ ನಾಮಪತ್ರ ಸಲ್ಲಿಸಿದ್ದು, 5 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಲಕ್ಷ್ಮಿ, ರವಿಕುಮಾರ್ ಹಾಗೂ ಗೌರಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 23 ಮಂದಿ ಕಣದಲ್ಲಿದ್ದಾರೆ.

ಮತದಾರರ ಸಂಖ್ಯೆ: ಹಳೇಬೀಡು(1)- ಪುರುಷರು-457, ಮಹಿಳೆಯರು-453 ಮತದಾರರಿದ್ದಾರೆ. ಹಳೆಬೀಡು(2)- 661, ಬೆಟ್ಟದೂರು- 462, ಮೈದನಹಳ್ಳಿ- 335, ಸಬ್ಬನಹಳ್ಳಿ-243, ಹಳ್ಳದಕಲ್ಲಹಳ್ಳಿ-473, ಮೂಡಲಕೊಪ್ಪಲು-430 ಮತಗಳಿವೆ. ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 3,944 ಮತದಾರರಿದ್ದಾರೆ.

Translate »