46 ಸಾವಿರ ಆಸ್ತಿ ಸಂಬಂಧ ಕ್ರಮಬದ್ಧ ನೋಂದಣಿ ಆಗದ ದಾಖಲೆ ಸಲ್ಲಿಕೆ
ಮೈಸೂರು

46 ಸಾವಿರ ಆಸ್ತಿ ಸಂಬಂಧ ಕ್ರಮಬದ್ಧ ನೋಂದಣಿ ಆಗದ ದಾಖಲೆ ಸಲ್ಲಿಕೆ

December 22, 2020

ಮೈಸೂರು, ಡಿ.21 ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ 2010ರಲ್ಲಿ ಜಾರಿ ಗೊಂಡ ಕಂದಾಯ ಇಲಾಖೆ ಮಹತ್ವಾ ಕಾಂಕ್ಷೆಯ `ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಓಆರ್) ಯೋಜನೆ’ ಅಡಿ 3,23, 616 ಆಸ್ತಿಗಳ ಸರ್ವೇ (ಅಳತೆ) ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 2,18,900 ಆಸ್ತಿ ಗಳಿಗೆ ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಇದರಲ್ಲಿ 46 ಸಾವಿರ ಆಸ್ತಿಗಳು ಕ್ರಮಬದ್ಧ ವಾಗಿ ನೋಂದಣಿ ಆಗದಿರುವುದು ಕಂಡು ಬಂದಿದೆ.

ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳ ಗೊಂಡಂತೆ (42 ಗ್ರಾಮಗಳು ನಗರ ಪ್ರದೇ ಶದ ವ್ಯಾಪ್ತಿಗೆ ಸೇರಿರುವ ಹಿನ್ನೆಲೆಯಲ್ಲಿ) ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ ಒಟ್ಟಾರೆ 3,23,616 ಆಸ್ತಿ ಸರ್ವೇ ನಡೆಸಿದ್ದು, ಇದರಲ್ಲಿ ಸಾರ್ವಜನಿಕರದ್ದು ಮಾತ್ರವ ಲ್ಲದೆ, ಸರ್ಕಾರಿ ಭೂಮಿ, ಆಸ್ತಿಗಳೂ ಒಳ ಗೊಂಡಿವೆ. ಸರ್ವೇ ನಡೆಸಿರುವ ಆಸ್ತಿಗಳ ಸಂಬಂಧ 2,18,900 ಆಸ್ತಿಗಳಿಗೆ ದಾಖಲೆ ಗಳನ್ನು ಸಂಗ್ರಹ ಮಾಡಲಾಗಿದೆ. ಈ ಪೈಕಿ 46 ಸಾವಿರ ಆಸ್ತಿಗಳ ಸಂಬಂಧ ಕ್ರಮ ಬದ್ಧವಾಗಿ ನೋಂದಣಿ ಆಗದಿರುವ ದಾಖಲೆಗಳು ಸಲ್ಲಿಕೆಯಾಗಿವೆ.

ಈ ಆಸ್ತಿಗಳ ಸಂಬಂಧ ಕೇವಲ 5 ಹಾಗೂ 10 ರೂ. ಮೌಲ್ಯದ ಛಾಪಾ ಕಾಗದದಲ್ಲಿ (ಸ್ಟ್ಯಾಂಪ್ ಪೇಪರ್) ಪರಭಾರೆ ಪ್ರಕ್ರಿಯೆ ನಡೆಸಿರುವ ದಾಖಲೆಗಳು ಸಲ್ಲಿಕೆಯಾಗಿವೆ. ಹೀಗಾಗಿ ಈ 46 ಸಾವಿರ ಆಸ್ತಿಗಳ ಸಂಬಂಧ ಕ್ರಮಬದ್ಧವಾಗಿ ನೋಂದಣಿ ಆಗಿಲ್ಲದ ಆಸ್ತಿಗಳೆಂದು ಯುಪಿಓಆರ್ ಆಸ್ತಿ ದಾಖಲೆ ಪತ್ರ ನೀಡುವ ಪ್ರಕ್ರಿಯೆಯಿಂದ ಸದ್ಯ ಹೊರ ಗಿಡಲಾಗಿದೆ. ಉಳಿದಂತೆ 1,04,716 ಆಸ್ತಿ ಗಳಿಗೆ ದಾಖಲೆ ಕಲೆ ಹಾಕುವ ಪ್ರಕ್ರಿಯೆ ಮುಂದುವರೆಸಲಾಗಿದೆ. ಇವುಗಳ ಸಂಬಂ ಧವೂ ಎಷ್ಟು ಆಸ್ತಿಗಳಿಗೆ ಸಮರ್ಪಕ ದಾಖಲೆ ಗಳು ಸಲ್ಲಿಕೆಯಾಗುವುವು ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಸರ್ವೇ ಬಳಿಕ ಸಮರ್ಪಕ ದಾಖಲೆಗಳು ಸಲ್ಲಿಕೆಯಾದರೆ ಯುಪಿಓಆರ್ ಅಥವಾ ಪಿಆರ್ ಕಾರ್ಡ್ ದಾಖಲೆ ಪಡೆದುಕೊಳ್ಳ ಬಹುದು. ಪಿಆರ್ ಕಾರ್ಡ್ ಪಡೆಯಲು ದಾಖಲೆ ಸಲ್ಲಿಸಿದ ಬಳಿಕ ಆಸ್ತಿಯ ವಿಚಾ ರಣಾ ಪ್ರಕ್ರಿಯೆ ಆರಂಭವಾಗಲಿದೆ. ಆ ಬಳಿಕ ಕರಡು ನಗರ ಆಸ್ತಿ ಮಾಲೀಕತ್ವದ ದಾಖಲೆ (ಡ್ರಾಫ್ಟ್ ಪಿಆರ್ ಕಾರ್ಡ್) ಸಿದ್ಧಗೊಳ್ಳಲಿದೆ. 9 ಪುಟಗಳ ಕರಡು ದಾಖಲೆ ಪಡೆದ ಬಳಿಕ ಆಕ್ಷೇಪಣೆ ಸಲ್ಲಿಸಲು 33 ದಿನಗಳ ಕಾಲಾವಕಾಶ ದೊರೆಯಲಿದೆ. ಯಾವುದೇ ಆಕ್ಷೇಪಣೆ ಇಲ್ಲವಾದಲ್ಲಿ 6 ಪುಟಗಳ ಅಂತಿಮ ಪಿಆರ್ ಕಾರ್ಡ್ ಸಿದ್ಧಗೊಳ್ಳಲಿದೆ. ಇದನ್ನು ಪಡೆಯಲು ಸರ್ಕಾರ ನಿಗದಿಗೊಳಿಸಿರುವ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. 30×40 ವಿಸ್ತೀರ್ಣದ ಆಸ್ತಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಸಿದ್ಧಗೊಳಿಸಿರುವ 1,72,837 ಆಸ್ತಿಗಳ ಡ್ರಾಫ್ಟ್ ಪಿಆರ್ ಕಾರ್ಡ್ (ಆಸ್ತಿ ದಾಖಲೆಯ ಕರಡು ಪತ್ರ) ಪೈಕಿ 1,61,191 ಆಸ್ತಿಗಳ ಡ್ರಾಫ್ಟ್ ಪಿಆರ್ ಕಾರ್ಡ್ ವಿತರಣೆ ಮಾಡ ಲಾಗಿದೆ. ಅದರಲ್ಲಿ 11,646 ಆಸ್ತಿಗಳ ಡ್ರಾಫ್ಟ್ ಪಿಆರ್ ಕಾರ್ಡ್ ವಿತರಣೆ ಸಂಬಂಧ ಪ್ರಕ್ರಿಯೆ ಪ್ರಗತಿಯಲ್ಲಿದೆ. 1,08,548 ಅಂತಿಮ ಪಿಆರ್ ಕಾರ್ಡ್ ಸಿದ್ಧಗೊಳಿಸಿದ್ದು, ಈ ಪೈಕಿ 49,439 ಆಸ್ತಿಗಳ ಅಂತಿಮ ಪಿಆರ್ ಕಾರ್ಡ್ ವಿತರಣೆ ಮಾಡಲಾಗಿದೆ. ಉಳಿದಂತೆ 59,109 ಆಸ್ತಿ ಗಳ ಅಂತಿಮ ಪಿಆರ್ ಕಾರ್ಡ್‍ಗಳನ್ನು ಮಾಲೀಕರು ಪಡೆದುಕೊಳ್ಳಬೇಕಿದೆ.

2012ರ ವೇಳೆಗೇ 3,23,616 ಆಸ್ತಿ ಸರ್ವೇ ಪೂರ್ಣ: 2012ರ ವೇಳೆಗೆ ಇದ್ದ ಮೈಸೂರು ನಗರ ಹಾಗೂ 42 ಗ್ರಾಮಗಳ ಎಲ್ಲಾ ಒಟ್ಟು 3,23,616 ಆಸ್ತಿಗಳ ಸರ್ವೇ ಪೂರ್ಣಗೊಳಿ ಸಿದ್ದು, ಆ ಬಳಿಕ ನಿರ್ಮಾಣವಾದ ನಿವೇ ಶನ ಹಾಗೂ ಕಟ್ಟಡಗಳ ಸರ್ವೇ ಸದ್ಯ ಕೈಗೆತ್ತಿಕೊಳ್ಳಬೇಕಿದೆ. ಆಸ್ತಿಯ ಹಕ್ಕು ಖಾತ ರಿಗೆ ಹಾಗೂ ಅಳತೆ ನಿಖರತೆಗೆ ನಗರ ಆಸ್ತಿ ಮಾಲೀಕತ್ವ ಯೋಜನೆಯಡಿ (ಯುಪಿ ಓಆರ್) ಪಡೆಯುವ ಆಸ್ತಿ ದಾಖಲೆ ಪತ್ರ ಸಹಕಾರಿ ಎಂದೇ ಹೇಳಲಾಗಿದೆ. ಇದ ರೊಂದಿಗೆ ಆಸ್ತಿಗೆ ಸಂಬಂಧಿಸಿದ ಕಂದಾಯ ಸಂಗ್ರಹದಲ್ಲೂ ಸ್ಪಷ್ಟತೆ ಮೂಡಲಿದ್ದು, ಜೊತೆಗೆ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಗಳು ಭಾಗಶಃ ಇಳಿಮುಖವಾಗಲಿದೆ ಎಂದೇ ಹೇಳಲಾಗುತ್ತಿದೆ.

ಯುಪಿಓಆರ್ ಯೋಜನೆಯಡಿ ಪ್ರತಿ ಆಸ್ತಿ ದಾಖಲೆಗೆ ಬಯೋಮೆಟ್ರಿಕ್ ವ್ಯವಸ್ಥೆ ದೊರೆಯಲಿದ್ದು, ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಡಲಿದೆ. ಜೊತೆಗೆ ಆಸ್ತಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಉಲ್ಲೇಖಗೊಳ್ಳಲಿದ್ದು, ಆಸ್ತಿ ಹಿನ್ನೆಲೆ ಹಾಗೂ ವಿಸ್ತೀರ್ಣದೊಂದಿಗೆ ದಾಖಲೆ ಸಿದ್ಧಗೊಳ್ಳ ಲಿದೆ. ಈ ಯೋಜನೆಯಡಿ ಪ್ರತಿ ಆಸ್ತಿಗೂ ನಿಖರವಾದ ಭೌಗೋಳಿಕ ಮಾಹಿತಿ ಹಾಗೂ ಹಕ್ಕು ದಾಖಲೆ ಮಾಹಿತಿ ಒದಗಿಸಲಿದೆ. ಮಾಲೀಕರ ಮಾಹಿತಿ, ಆಸ್ತಿಯ ವಿಸ್ತೀರ್ಣದ ಅಳತೆ, ದಿಕ್ಕುಗಳು, ನಕ್ಷೆ ಸೇರಿದಂತೆ ನಿಖರ ದತ್ತಾಂಶ ದಾಖಲಾಗಲಿದೆ. ಯೋಜನೆಯ ಮಾರ್ಗಸೂಚಿಯಂತೆ ನಗರ ಮಾಪನ ಯೋಜನಾ ಕಚೇರಿ ವತಿಯಿಂದ ಸ್ವಯಂ ಆಗಿ 2012 ವೇಳೆಗೆ ಮೈಸೂರು ನಗರ ಹಾಗೂ 42 ಗ್ರಾಮಗಳ ಖಾಸಗಿ, ಸರ್ಕಾರಿ ಆಸ್ತಿಗಳ ಸರ್ವೇ ಕಾರ್ಯ ಪೂರ್ಣಗೊಳಿಸ ಲಾಗಿದೆ. ಸದ್ಯ ಈ ಎಲ್ಲಾ ಆಸ್ತಿಗಳ ಸಮ ರ್ಪಕ ದಾಖಲೆಗಳನ್ನು ಸಂಗ್ರಹಿಸಿ ಅಂತಿಮ ಪಿಆರ್ ಕಾರ್ಡ್ ವಿತರಣೆ ಪ್ರಕ್ರಿಯೆ ನಡೆಸ ಲಾಗುತ್ತಿದೆ. ಆಸಕ್ತ ನಾಗರಿಕರು ಪಿಆರ್ ಕಾರ್ಡ್ ಪಡೆಯುವ ಸಂಬಂಧ ನಗರ ಮಾಪನ ಯೋಜನಾ ಕಚೇರಿಗೆ ಭೇಟಿ ನೀಡಬಹುದು.

Translate »