ಕಾಂಗ್ರೆಸ್‍ನವರಿಂದ ಕೋಮು ಸೌಹಾರ್ದತೆ ಕದಡುವ ಯತ್ನ: ಬಿ.ಪಿ.ಮಂಜುನಾಥ್
ಮೈಸೂರು

ಕಾಂಗ್ರೆಸ್‍ನವರಿಂದ ಕೋಮು ಸೌಹಾರ್ದತೆ ಕದಡುವ ಯತ್ನ: ಬಿ.ಪಿ.ಮಂಜುನಾಥ್

August 24, 2018

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಎನ್‍ಆರ್ ಕ್ಷೇತ್ರದ ವಾರ್ಡ್‍ಗಳಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‍ನವರು ಕೋಮು ಸೌಹಾರ್ದತೆಕ್ಕೆ ಧಕ್ಕೆ ತರಲು ಮುಂದಾಗಿದ್ದು, ವಾರ್ಡ್ 16ರ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಆರೀಫ್ ಹುಸೇನ್ ಪ್ರಚಾರದ ವೇಳೆ ಕೋಮು ಸೌಹಾರ್ದತೆಯನ್ನು ಕದಡುವಂತಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೀಫ್ ಹುಸೇನ್ ಅವರು ಪ್ರಚಾರದ ವೇಳೆ ಕೋಮು ಸಾಮರಸ್ಯ ಹಾಳು ಮಾಡುವಂತೆ ವರ್ತಿಸಿದ್ದಾರೆ. 16ನೇ ವಾರ್ಡ್‍ನ ‘ಬಿಜೆಪಿ ಅಭ್ಯರ್ಥಿ ಭಾನುಪ್ರಕಾಶ್ ಗೆದ್ದರೆ ನಾವು ಹಿಂದೂಗಳ ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಆರೀಫ್ ಹುಸೇನ್ ಈ ಹಿಂದೆ ಹಲವು ಬಾರಿ ವಾರ್ಡ್‍ನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ದೇವಸ್ಥಾನದ ಬೀರಪ್ಪ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದರು. ಆದರೆ ಈಗ ಸ್ವಾಮೀಜಿಯವರ ಪುತ್ರ ಭಾನುಪ್ರಕಾಶ್ ತಮ್ಮ ವಿರುದ್ಧ ಸ್ಪರ್ಧಿಸಿರುವುದನ್ನು ಸಹಿಸದೇ ಸೋಲಿನ ಭೀತಿಯಿಂದ ಸಮಾಜದಲ್ಲಿನ ಸಾಮರಸ್ಯ ಹಾಳು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಹಿಂದೂ ಧರ್ಮೀಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಓವೈಸಿ ಭೇಟಿ ಆ.24ರಂದು ಮೈಸೂರಿಗೆ ನೀಡುತ್ತಿದ್ದು, ಇವರು ಮೈಸೂರಿನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಅಪಾಯವಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಇವರ ಮೈಸೂರು ಭೇಟಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಭೋವಿ, ಮಡಿವಾಳ ಸೇರಿದಂತೆ ಹಿಂದುಳಿದ ಸಣ್ಣ ಸಣ್ಣ ಸಮುದಾಯಗಳಿಗೆ ಬಿಜೆಪಿ `ಬಿ’ ಫಾರಂ ನೀಡಿದ್ದು, ಎನ್‍ಆರ್ ಕ್ಷೇತ್ರದಲ್ಲಿ 34ನೇ ವಾರ್ಡ್‍ನಲ್ಲಿ ಅಲ್ಪಸಂಖ್ಯಾತ ಬಂಧುಗಳಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬುದನ್ನು ಟೀಕಾಕಾರರು ಮನಗಾಣಲಿ ಎಂದರು.

Translate »