ವಾಣಿಜ್ಯ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಸಂಬಂಧ ನಾಳೆ ಮಹತ್ವದ ನಿರ್ಧಾರ
ಮೈಸೂರು

ವಾಣಿಜ್ಯ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಸಂಬಂಧ ನಾಳೆ ಮಹತ್ವದ ನಿರ್ಧಾರ

August 23, 2018

ಬೆಂಗಳೂರು: ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ ವನ್ನು ರಾಜ್ಯ ಸರ್ಕಾರ ಬರುವ ಶುಕ್ರವಾರ ತೆಗೆದುಕೊಳ್ಳಲಿದೆ.

ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಒಂದು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿ, ಆದೇಶ ಹೊರಡಿಸಲಾಗಿದೆ.

ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆ ಯಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ವಿಚಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮೋದನೆ ಪಡೆದು ಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರದ ವಿವಿಧ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಈ ಮೊಬಲಗುಗಳನ್ನು ಸರ್ಕಾರವೇ ತೀರಿಸಲಿದ್ದು, ಅದಕ್ಕೆ ಖಾತ್ರಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಾಣಿಜ್ಯ ಬ್ಯಾಂಕುಗಳಿಗೆ ಮೂರು ಕಂತುಗಳಲ್ಲಿ ಹಣ ಸಂದಾಯ ಮಾಡಲಾಗುವುದು. ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು 26 ಸಾವಿರ ಕೋಟಿ ರೂ. ಸಾಲ ಪಡೆದಿದ್ದು, ಅದಕ್ಕೆ 5300 ಕೋಟಿ ರೂ. ಬಡ್ಡಿ ಬೆಳೆದಿದೆ.

ಈ ಬಾಬ್ತನ್ನು ಮೂರು ಕಂತುಗಳಲ್ಲಿ ಅಂದರೆ ತಲಾ 8666.66 ಕೋಟಿ ರೂ.ಗಳನ್ನು ಸಂಬಂಧಪಟ್ಟ ಬ್ಯಾಂಕುಗಳಿಗೆ ನೀಡಲಿದ್ದಾರೆ. ಮೊದಲ ಕಂತಿನಲ್ಲಿ ಈ ನಿಗದಿಪಡಿಸಿದ ಹಣ ಪಾವತಿಸಲಿದ್ದು, ಉಳಿದ ಎರಡು ಕಂತುಗಳಿಗೆ ಸರ್ಕಾರ ಖಾತರಿ ನೀಡುತ್ತದೆ. ಈ ಖಾತರಿಯನ್ನೇ ಆಧಾರವಾಗಿಟ್ಟುಕೊಂಡು ನಿಮ್ಮ ನಿಮ್ಮ ಬ್ಯಾಂಕುಗಳಲ್ಲಿ ನಮ್ಮ ರೈತರು ಎರಡು ಲಕ್ಷ ರೂ.ವರೆಗೂ ಪಡೆದಿರುವ ಸಾಲ ಮನ್ನಾ ಮಾಡಿ. ಅವರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿ ಸುವಂತೆ ಸಲಹೆ ಮಾಡಲಿದ್ದಾರೆ. ಆದರೆ ಕೆಲವು ವಾಣಿಜ್ಯ ಬ್ಯಾಂಕುಗಳು ಕ್ಯಾತೆ ತೆಗೆದಿದ್ದು, ನಮಗೆ ಒಂದೇ ಕಂತಿನಲ್ಲಿ ಹಣ ಪಾವತಿಸಿದರೆ, ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುತ್ತೇವೆ. ಇಲ್ಲ ದಿದ್ದರೆ, ನಮಗೆ ಪೂರ್ಣವಾಗಿ ಸಂದಾಯವಾದ ನಂತರ ಋಣಮುಕ್ತ ಪತ್ರವನ್ನು ನೀಡಲಾಗುವುದು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಸಾಲ ಮನ್ನಾ ಬಗ್ಗೆ ಸರ್ಕಾರದ ಸಲಹೆಗಳನ್ನು ಪೂರ್ಣವಾಗಿ ಒಪ್ಪಿಕೊಂಡಿದ್ದ ರಾಷ್ಟ್ರೀಕೃತ ಬ್ಯಾಂಕುಗಳು ನಂತರ ರಾಜಕೀಯ ಒತ್ತಡಕ್ಕೆ ಮಣಿದು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದು ಮುಖ್ಯಮಂತ್ರಿಯವರಿಗೆ ಇರಿಸು-ಮುರಿಸು ತಂದಿದ್ದರೂ, ಬಿಜೆಪಿಯವರು ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಲಾಭವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಒತ್ತಡ ತಂದು ವಾಣಿಜ್ಯ ಬ್ಯಾಂಕುಗಳ ಮೇಲೆ ಪ್ರಭಾವ ಬೀರಿದ್ದಾರೆ.
ಇದಕ್ಕೆ ಮಣಿಯದಿರಲು ನಿರ್ಧರಿಸಿರುವ ಕುಮಾರಸ್ವಾಮಿಯವರು ತಾವು ತೆಗೆದುಕೊಂಡ ನಿರ್ಧಾರ ಪ್ರಕಟಿಸಲಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ನಿರ್ಧಾರಗಳನ್ನು ಬ್ಯಾಂಕುಗಳಿಗೂ ರವಾನೆ ಮಾಡುತ್ತಾರೆ.

ಬ್ಯಾಂಕುಗಳು ರಾಜಕೀಯ ಒತ್ತಡಕ್ಕೆ ಮಣಿದು, ರೈತರಿಗೆ ಋಣಮುಕ್ತ ಪತ್ರ ನೀಡದಿದ್ದರೆ, ಉಳಿದ ಎರಡು ಕಂತಿನ ಬಾಬ್ತು ವಸೂಲಿಗೆ ರೈತರ ಮನೆ ಬಾಗಿಲಿಗೆ ತೆರಳಿದರೆ, ಅಂತಹ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಯಾವುದೇ ರೀತಿಯ ರಕ್ಷಣೆ ದೊರೆಯುವುದಿಲ್ಲ ಎಂಬ ಎಚ್ಚರಿಕೆ ನೀಡಲಿದ್ದಾರೆ.

Translate »