40 ದಿನಗಳ ಬಳಿಕ ಕೆಆರ್‌ಎಸ್‌ ಹೊರ ಹರಿವು ಬಂದ್
ಮೈಸೂರು

40 ದಿನಗಳ ಬಳಿಕ ಕೆಆರ್‌ಎಸ್‌ ಹೊರ ಹರಿವು ಬಂದ್

August 23, 2018

ಮಂಡ್ಯ:  ಕೊಡಗು ಭಾಗದಲ್ಲಿ ಮಳೆಯ ಅಬ್ಬರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದಿಂದ ಬಿಡಲಾಗುತ್ತಿದ್ದ ನೀರಿನ ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ, ಜಲಾಶಯದಿಂದ ಸುರಕ್ಷತೆ ದೃಷ್ಟಿಯಿಂದ ಹೊರ ಬಿಡಲಾಗುತ್ತಿದ್ದ ನೀರನ್ನು 40 ದಿನಗಳ ಬಳಿಕ ಸ್ಥಗಿತಗೊಳಿಸಲಾಗಿದೆ ಎಂದರು.

ಕಳೆದ ಜು. 14 ರಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನದಿಗೆ ನೀರನ್ನು ಹೊರ ಬಿಡಲಾಗುತ್ತಿತ್ತು. ಪ್ರತಿನಿತ್ಯ ಕನಿಷ್ಠ 15 ಸಾವಿರ ಕ್ಯೂಸೆಕ್ಸ್ ನಿಂದ 1.50 ಲಕ್ಷ ಕ್ಯೂಸೆಕ್ಸ್‍ವರೆಗೂ ನದಿಗೆ ನೀರನ್ನು ಹರಿಸಲಾಗಿತ್ತು. ಆದರೆ ಈಗ ಅಣೆಕಟ್ಟೆಗೆ ಬರುವ ಒಳ ಹರಿವಿನ ಪ್ರಮಾಣ ಕಡಿಮೆ ಆಗಿರುವುದರಿಂದ ನದಿಗೆ ಬಿಡುತ್ತಿದ್ದ ನೀರನ್ನು ಇಂದಿನಿಂದಲೇ ಸಂಪೂರ್ಣ ನಿಲ್ಲಿಸಲಾಗಿದೆ.

ಸದ್ಯಕ್ಕೆ ರೈತರ ಬೆಳೆಗೆ ನಾಲೆಗಳ ಮೂಲಕ ಬಿಡಲಾಗುತ್ತಿರುವ ನೀರನ್ನು ನಿಲ್ಲಿಸಿಲ್ಲ. ಇಂದಿನ ನೀರಿನ ಮಟ್ಟ 122.25 ಅಡಿ ಇದ್ದು, ಒಳ ಹರಿವಿನ ಪ್ರಮಾಣ 28,438 ಕ್ಯೂಸೆಕ್ಸ್ ಇದೆ ಎಂದರು. ಕಳೆದ 40 ದಿನಗಳಿಂದಲೂ ಕೇರಳ, ಕೊಡಗು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಮಳೆ ಸೃಷ್ಟಿಸಿದ ಅತಿವೃಷ್ಟಿಯಿಂದಾಗಿ ಕಾವೇರಿ ನದಿ ಉಕ್ಕಿ ಹರಿದಿತ್ತು. ನದಿ ಪಾತ್ರ ಜನ-ಜಾನುವಾರು, ಪ್ರಾಣಿ-ಪಕ್ಷಿ ಸಂಕುಲ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿತ್ತು.

ನೂರಾರು ಕಟ್ಟಡಗಳು, ದೇವಸ್ಥಾನಗಳು, ಪ್ರವಾಸಿತಾಣಗಳು ಸಾಕಷ್ಟು ತೊಂದರೆಗೆ ಸಿಲುಕಿದ್ದವು. ಇದೀಗ ಜಲಾಶಯದಿಂದ ಹೊರ ಹರಿವು ನಿಲ್ಲಿಸಲಾಗಿದೆ. ಇದರಿಂದ ನದಿ ಪಾತ್ರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಚರ್ಚೆ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ, ಸಣ್ಣ ನೀರಾವರಿ ಸಚಿವರೂ ಆದ ಸಿ.ಎಸ್.ಪುಟ್ಟರಾಜು, ಮೇಕೆದಾಟು ಯೋಜನೆ ಜಾರಿಗಾಗಿ ಶೀಘ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂತನೆ ಮಾಡಿದ್ದಾರೆ. ಶೀಘ್ರವಾಗಿ ಮಾತುಕತೆ ನಡೆಸಿ ಅಣೆಕಟ್ಟೆ ನಿರ್ಮಾಣ ಮಾಡಲಾಗುವುದು. ಅಣೆಕಟ್ಟೆ ನಿರ್ಮಾಣ ಮಾಡಿದರೆ ನಾವು ಅದರ ನೀರನ್ನು ಉಪಯೋಗಿಸುವುದಕ್ಕಿಂತಲೂ ತಮಿಳುನಾಡಿನ ಜನತೆಯೇ ಉಪಯೋಗಿಸಲು ಅನುಕೂಲವಾಗುತ್ತದೆ ಎಂದರು.

ಕಾವೇರಿಯಿಂದ ಬರುವ ನೀರು ಅನಾವಶ್ಯಕವಾಗಿ ಸಮುದ್ರ ಸೇರುತ್ತಿದೆ. ಈ ನೀರಿಗೆ ಅಣೆಕಟ್ಟು ಕಟ್ಟುವುದರಿಂದ ನೀರು ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ. ಈ ಬಗ್ಗೆ ಅಲ್ಲಿನ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಜೊತೆಗೆ ಅಲ್ಲಿನ ಸಿಎಂಗೂ ಅರ್ಥ ಮಾಡಿಸಲಿದ್ದಾರೆ. ಈ ಯೋಜನೆಗೆ ಸಿಎಂ ಕುಮಾರಸ್ವಾಮಿ ನೂರಕ್ಕೆ ನೂರರಷ್ಟು ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ನೀಡಿದ್ದ ಭರವಸೆಯಂತೆಯೇ ಇದನ್ನು ಸಾಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿನ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

Translate »