ಕೊಡಗಿನ ನೆರೆಯಲ್ಲೂ ನುಂಗಣ್ಣರು…!
ಮೈಸೂರು

ಕೊಡಗಿನ ನೆರೆಯಲ್ಲೂ ನುಂಗಣ್ಣರು…!

August 23, 2018

ಕುಶಾಲನಗರ:  ಆಘಾತಕಾರಿಯಾದರೂ ಇದು ಸತ್ಯ. ಕಳೆದ ಒಂದು ವಾರದಿಂದಲೂ ಧಾರಾ ಕಾರವಾಗಿ ಸುರಿದ ಮಳೆ ಮತ್ತು ಬೆಟ್ಟ ಗುಡ್ಡಗಳ ಕುಸಿತ ದಿಂದ ಕೊಡಗಿನ ಜನತೆ ತತ್ತರಿಸಿದ್ದು, ಮೈಸೂರು ಜಿಲ್ಲೆ ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಕೊಡಗಿಗೆ ಪರಿಹಾರ ಸಾಮಗ್ರಿಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ನೆರೆ ಸಂತ್ರಸ್ತರಿಗಾಗಿ ಬಂದ ಪರಿಹಾರ ಸಾಮಗ್ರಿಗಳನ್ನು ಮುಂಬರುವ ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಈ ಸಾಮಗ್ರಿಗಳನ್ನು ವಿತರಿಸಲು ರಾಜಕಾರಣಿಗಳು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಖಾಸಗಿ ಗೋಡೌನ್‍ಗಳಿಗೆ ರವಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಕುಶಾಲನಗರ ನಿವಾಸಿಗಳಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಎಚ್ಚೆತ್ತುಕೊಂಡು, ನೆರೆ ಸಂತ್ರಸ್ತರಿ ಗಾಗಿ ಪಡೆದಿರುವ, ಹಾಲಿ ಇರುವ ಮತ್ತು ಪೂರೈಕೆ ಮಾಡಿರುವ ಪರಿಹಾರ ಸಾಮಗ್ರಿಗಳನ್ನು ಪರಿಶೀಲಿ ಸಲು ಕ್ರಮ ಕೈಗೊಂಡಿದ್ದು, ಆ ಮೂಲಕ ಪರಿಹಾರ ಸಾಮಗ್ರಿ ದುರುಪಯೋಗವನ್ನು ತಡೆಗಟ್ಟಲು ಮುಂದಾಗಿದೆ.

ಕೊಡಗು ಜಿಲ್ಲೆಗೆ ಈಗಾಗಲೇ ಟನ್ನು ಗಟ್ಟಲೇ ನಾನಾ ರೀತಿಯ ಪರಿಹಾರ ಸಾಮಗ್ರಿಗಳು ಬಂದಿವೆ. ಮಿನಿ ಟ್ರಕ್ಕುಗಳು ಮತ್ತು ಇತರೆ ವಾಹನ ಗಳನ್ನು ಹೊರತುಪಡಿಸಿ ಸರಾಸರಿ 40 ಟ್ರಕ್‍ಗಳಷ್ಟು ಪರಿಹಾರ ಸಾಮಗ್ರಿಗಳು ಮೈಸೂರು-ಕುಶಾಲನಗರ ಗಡಿ ಪ್ರದೇಶದ ಮೂಲಕ ಪ್ರತಿದಿನ ಬಂದಿದೆ. ಅಲ್ಲದೆ, ಬೆಳಗಾವಿ, ಬೆಂಗಳೂರು, ಬಾಗಲಕೋಟೆ ಮತ್ತು ಚಿತ್ರದುರ್ಗ ಇನ್ನಿತರ ಪ್ರದೇಶಗಳಿಂದಲೂ ಲೋಡುಗಟ್ಟಲೇ ಪರಿಹಾರ ಸಾಮಗ್ರಿಗಳು ಬಂದಿವೆ.

ಕುಶಾಲನಗರಕ್ಕೆ ಬಂದ ಪರಿಹಾರ ಸಾಮಗ್ರಿಗಳನ್ನು ಆಯಾ ಪ್ರದೇಶದ ಸ್ಥಳೀಯ ನಿವಾಸಿಗಳು, ಸ್ವಯಂ ಸೇವಾ ಸಂಘಗಳು ಮತ್ತು
ಎನ್‍ಜಿಓಗಳು ಸಂಗ್ರಹಿಸಿ, ಅವುಗಳನ್ನು ಸುಂಟಿಕೊಪ್ಪ, ಮಡಿಕೇರಿ ಮತ್ತು ಇನ್ನಿತರೆ ಪ್ರದೇಶಗಳಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರಗಳಲ್ಲಿ ಹಂಚಲಾಗಿದೆ. ಆದರೆ, ಆ.20ರಂದು ಕೆಲವು ಲಾರಿಗಳಲ್ಲಿ ಪರಿಹಾರ ಸಾಮಗ್ರಿಗಳು ಬಂದಿದ್ದು, ಸ್ಥಳೀಯ ನಿವಾಸಿಗಳು ತಡೆದು, ಅವುಗಳಲ್ಲಿದ್ದ ಸಾಮಗ್ರಿಗಳನ್ನು ಖಾಸಗಿ ಗೋಡೌನ್‍ಗೆ ಸಾಗಿಸುವಂತೆ ಸೂಚಿಸಿದ್ದಾರೆ. ಲಾರಿ ಚಾಲಕರು ಇದರ ಬಗ್ಗೆ ಪ್ರಶ್ನಿಸಿದಾಗ, ಪರಿಹಾರ ಸಾಮಗ್ರಿಗಳನ್ನು ತಾತ್ಕಾಲಿಕವಾಗಿ ಖಾಸಗಿ ಗೋಡೌನ್‍ನಲ್ಲಿ ಇಟ್ಟು, ನಂತರದ ದಿನಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ವಿತರಿಸುವುದಾಗಿ ತಿಳಿಸಿದ್ದಾರೆ.

ಕೆಲವು ರಾಜಕಾರಣಿಗಳು ಸಹ ಪರಿಹಾರ ಸಾಮಗ್ರಿಗಳನ್ನು ತಮ್ಮ ಗೋಡೌನ್‍ನಲ್ಲಿ ಇರಿಸುವಂತೆ ಸೂಚಿಸಿದ್ದಾರೆ. ಹೀಗೆ ಸಂಗ್ರಹಿಸಿದ ಸಾಮಗ್ರಿಗಳನ್ನು ಮುಂಬರುವ ಟೌನ್ ಪಂಚಾಯಿತಿ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಳಸಲಾಗುತ್ತದೆ ಎಂಬುದು ಕುಶಾಲನಗರದ ಚಂದ್ರಮೋಹನ್ ಅವರಿಗೆ ಅರಿವಾಗಿದೆ. ಪಕ್ಷದ ಕೆಲ ಕಾರ್ಯಕರ್ತರು, ಈ ಪದಾರ್ಥಗಳ ಸಂಗ್ರಹಣೆ ಬಗ್ಗೆ ತಮ್ಮ ನಾಯಕರನ್ನು ಕೇಳಿದಾಗ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶವಿರುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ ಎಂದರು.

ನಂತರ ಚಂದ್ರಮೋಹನ್, ಕೊಡಗು ಜಿಲ್ಲಾಧಿಕಾರಿ ಅವರಿಗೆ ಖಾಸಗಿ ಗೋಡೌನ್‍ಗೆ ರವಾನೆಯಾದ ಸಾಮಗ್ರಿಗಳನ್ನು ಪರಿಶೀಲಿಸುವಂತೆ ದೂರು ಸಲ್ಲಿಸಿದ್ದಾರೆ. ಈಗ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕುಶಾಲನಗರ ಮಾರ್ಗವಾಗಿ ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡು ಬರುವ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಆ ವಾಹನಗಳ ಫೋಟೋ ತೆಗೆಯುವ ಕಾರ್ಯ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಪರಿಹಾರ ವಿತರಿಸುವ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿರುವುದರಿಂದ ಈ ಕೆಲಸವನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ ಎಂದರು.

ಕೊಪ್ಪ ಗೇಟ್‍ನಲ್ಲಿ ಅರಣ್ಯ ಸಿಬ್ಬಂದಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಒಂದು ಬಾರಿ ಪರಿಹಾರ ಸಾಮಗ್ರಿಗಳನ್ನು ಲೆಡ್ಜರ್‍ನಲ್ಲಿ ದಾಖಲಿಸಿ, ಫೋಟೋ ತೆಗೆದ ಬಳಿಕ ನೇರವಾಗಿ ಟ್ರಕ್ಕುಗಳನ್ನು ಸಾಮಗ್ರಿ ಇಳಿಸಲು ಆರ್‍ಎಂಸಿ ಗೋಡೌನ್‍ಗೆ ಕಳುಹಿಸಲಾಗುವುದು. ಆರ್‍ಎಂಸಿ ಗೋಡೌನ್‍ನಿಂದ ಪರಿಹಾರ ಕೇಂದ್ರಗಳಿಗೆ ಅವರ ಅಗತ್ಯತೆಯನ್ನು ತಿಳಿದು ಸಾಮಗ್ರಿ ಸಾಗಿಸಲಾಗುವುದು. “ನಿನ್ನೆ, ಕೇವಲ 2 ಗಂಟೆಗಳಲ್ಲಿ 20 ಟ್ರಕ್ಕುಗಳು ಪರಿಹಾರ ಸಾಮಗ್ರಿ ತುಂಬಿಕೊಂಡು ಬಂದವು. ಅವುಗಳಲ್ಲಿ ಕೆಲವು ಮೈಸೂರು ಮತ್ತು ಬೆಂಗಳೂರಿನಿಂದ ಬಂದಿದ್ದವು. ದೂರದ ಬೆಳಗಾವಿ ಮತ್ತು ಬಾಗಲಕೋಟೆಗಳಿಂದಲೂ ತಂದ ಸಾಮಗ್ರಿಗಳನ್ನು ಗೋಡೌನ್‍ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ತಪಾಸಣಾ ಕೇಂದ್ರವನ್ನು ಮಡಿಕೇರಿ ಮತ್ತು ವಿರಾಜಪೇಟೆಯಲ್ಲೂ ತೆರೆಯಲಾಗಿದ್ದು, ಪರಿಹಾರ ಸಾಮಗ್ರಿಗಳ ದುರುಪಯೋಗವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಾಮಗ್ರಿಗಳನ್ನು ಗೋಣಿಕೊಪ್ಪ, ಮಡಿಕೇರಿ ಮತ್ತು ಕುಶಾಲನಗರದ ಆರ್‍ಎಂಸಿ ಗೋಡೌನ್‍ಗಳಲ್ಲಿ ಅನ್‍ಲೋಡ್ ಮಾಡಲಾಗುವುದು. ಬಳಿಕ ಅಗತ್ಯಾನುಸಾರ ಅವುಗಳನ್ನು ನಿರಾಶ್ರಿತ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎನ್ನಲಾಗಿದೆ.

Translate »