ಹಾಸನ 5 ಸ್ಥಳೀಯ ಸಂಸ್ಥೆಗಳ ಮತದಾನದ ವಿಶೇಷತೆಗಳು
ಹಾಸನ

ಹಾಸನ 5 ಸ್ಥಳೀಯ ಸಂಸ್ಥೆಗಳ ಮತದಾನದ ವಿಶೇಷತೆಗಳು

September 1, 2018

ಹಾಸನ: ಹಾಸನದ 1ನೇ ವಾರ್ಡ್‍ನಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆಗಮಿಸಿ ಹಕ್ಕು ಚಲಾಯಿಸಿದರಲ್ಲದೆ, ಕರ್ತವ್ಯದ ನಡವೆಯೂ ಮತದಾನ ಮಾಡಿ ಮಾದರಿಯಾದರು.

ಹಕ್ಕು ಚಲಾಯಿಸಿದ ನವ ದಂಪತಿ: ಹೊಳೆನರಸೀಪುರ ವಾರ್ಡ್ ನಂ. 2ರಲ್ಲಿ ನವದಂಪತಿ ಮದುವೆ ನಂತರ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪಟ್ಟಣದ ಚನ್ನಾಂಬಿಕಾ ಕಲ್ಯಾಣಮಂಟಪ ದಲ್ಲಿಂದು ಮದುವೆಯಾದ ಪೂಜಾ, ಕಾರ್ತಿಕ್ ನವ ದಂಪತಿ ತಾಳಿಕಟ್ಟಿದ ಕೂಡಲೇ ವಾರ್ಡ್ ನಂ. 2ರ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಬಂದು ಮತದಾನ ಮಾಡಿ ಇತರರಿಗೆ ಮಾದರಿಯಾದರು.

ಕೆಲಕಾಲ ಗೊಂದಲ: ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯ 17ನೇ ವಾರ್ಡ್‍ನಲ್ಲಿ ಅಭ್ಯರ್ಥಿಗಳ ನಾಮ ಫಲಕ ಹಾಕದ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಕೆಲಕಾಲ ಗೊಂದಲಕ್ಕೊಳಗಾದರು. ಆದರೆ ಈ ಬಗ್ಗೆ ಪ್ರಶ್ನಿಸಿದರೂ ಯಾವೊಬ್ಬ ಅಧಿಕಾರಿಯೂ ಕೂಡಾ ತಲೆ ಕೆಡಿಸಿಕೊಳ್ಳಲ್ಲ. ಕೆಲವರಿಗೆ ಅಭ್ಯರ್ಥಿಗಳು ಯಾರೆಂದೇ ಗೊತ್ತಿಲ್ಲದ ಪರಿಣಾಮ ಕೆಲವು ಮತದಾರರು ಮತದಾನ ಮಾಡದೇ ಗೊಂದಲಕ್ಕೊಳಗಾಗಿ ಕೆಲಕಾಲ ಮತಗಟ್ಟೆ ಹೊರಗೆ ನಿಂತ ಪ್ರಸಂಗ ಕಂಡು ಬಂತು. ಮಾಧ್ಯಮದವರು ಪ್ರಶ್ನಿಸಿದ ಬಳಿಕ ಅಧಿ ಕಾರಿಗಳು, ಅಭ್ಯರ್ಥಿಗಳ ನಾಮಫಲಕ ಅಂಟಿಸಿ ಗೊಂದಲಕ್ಕೆ ತೆರೆ ಎಳೆದರು.

ಕಾಂಗ್ರೆಸ್, ಜೆಡಿಎಸ್ ತಳ್ಳಾಟ-ನೂಕಾಟ:ಹೊಳೆನರಸೀಪುರ ವಾರ್ಡ್ ನಂ.1, 11, 16 ಸೇರಿದಂತೆ ಅಲ್ಲಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ -ನೂಕಾಟ ಏರ್ಪಟಿತು. ವಾರ್ಡ್ ನಂ.11 ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಹು ತೇಕ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿತ್ತು.

ಮತಯಂತ್ರದಲ್ಲಿ ದೋಷ: ಚನ್ನರಾಯಪಟ್ಟಣ ಪುರಸಭೆಯ ವಾರ್ಡ್ ನಂ.2ರ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಕಂಡು ಬಂದು ಆತಂಕ ಸೃಷ್ಟಿಯಾ ಯಿತು. ಕಾಂಗ್ರೆಸ್ ಅಭ್ಯರ್ಥಿ ಸುಜಾತ ಮತ್ತು ಬಿಜೆಪಿ ಅಭ್ಯರ್ಥಿ ಶಂಕರಮ್ಮ ಅವರ ಕ್ರಮ ಸಂಖ್ಯೆ ಅದಲು-ಬದಲಿನಿಂದ ಮತದಾರರಲ್ಲಿ ಗೊಂದಲ ಉಂಟಾಯಿತು. ಅಧಿಕಾರಿಗಳ ಯಡವಟ್ಟಿನಿಂದ ನಡೆದಿರೋ ತಪ್ಪಿಗೆ ಅಭ್ಯರ್ಥಿಗಳು ಗಲಾಟೆ ಮಾಡಿ ಚುನಾವಣೆ ನಿಲ್ಲಿಸುವಂತೆ ಒತ್ತಾಯಿಸಿದ ಘಟನೆಯೂ ನಡೆಯಿತು.

ನೀತಿ ಸಂಹಿತೆ ಉಲ್ಲಂಘನೆ: ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚನ್ನರಾಯ ಪಟ್ಟಣದಲ್ಲಿ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಆ.31ರಂದು ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಸಂತೆ ಅಥವಾ ಜಾತ್ರೆ ನಡೆಸದಂತೆ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ನೀತಿ ಸಂಹಿತೆ ಉಲ್ಲಂಘಿಸಿ ಸ್ಥಳೀಯ ಆಡಳಿತ ದನಗಳ ಸಂತೆಗೆ ಅವಕಾಶ ಕೊಟ್ಟಿದೆ ಎನ್ನಲಾಗಿದೆ. ಚನ್ನರಾಯಪಟ್ಟಣದ ವಾಸವಿ ಬಸ್ ನಿಲ್ದಾಣದ ಸಮೀಪ ಕೃಷಿ ಮಾರುಕಟ್ಟೆ ಕಚೇರಿ ಯಲ್ಲಿ ಮತದಾನ ಪ್ರಕ್ರಿಯೆ ನಡೆಯು ತ್ತಿದ್ದರೂ ಅನತಿ ದೂರದಲ್ಲಿರುವ ಕೆಪಿ ಟಿಸಿಎಲ್ ಕಚೇರಿ ಮುಂಭಾಗ ದನಗಳ ಸಂತೆ ಯಥಾಪ್ರಕಾರ ಜರುಗಿತು.

Translate »