ತವರಿನಲ್ಲಿ `ತೆನೆ’ ಮಣಿಸಲು `ಕೈ-ಕಮಲ’ ಒಳಒಪ್ಪಂದ
ಹಾಸನ

ತವರಿನಲ್ಲಿ `ತೆನೆ’ ಮಣಿಸಲು `ಕೈ-ಕಮಲ’ ಒಳಒಪ್ಪಂದ

September 1, 2018

ಹೊಳೆನರಸೀಪುರ:  ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಾವು ಮುಂಗುಸಿಯಂತಿರುವ ಕಾಂಗ್ರೆಸ್, ಬಿಜೆಪಿ ಹೊಳೆರನಸೀಪುರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಮಣಿಸಲು ಒಳ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಲಕ್ಷಣಗಳಿದ್ದು, ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಜೆಡಿಎಸ್‍ನತ್ತ ಮುಖ ಮಾಡುವ ಸಾಧ್ಯತೆಗಳು ಗೋಚರಿಸಿವೆ.

ಈ ಬಾರಿಯ ಪುರಸಭಾ ಚುನಾವಣೆ ಯಲ್ಲಿ 23 ವಾರ್ಡ್‍ಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ರಾಷ್ಟ್ರಿಯ ಪಕ್ಷ ಬಿಜೆಪಿ ಮಾತ್ರ ಕಾಂಗ್ರೆಸ್‍ಗೆ ಪರೋಕ್ಷ ಬೆಂಬಲ ಸೂಚಿಸಿ ಕೇವಲ 12 ವಾರ್ಡ್‍ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಕೂಡ ನಾಮಕಾವಸ್ಥೆ ಎಂಬಂತಾಗಿದೆ.

ಪ್ರಬಲ ಪೈಪೋಟಿ ಇಲ್ಲ: ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಳೆದು ತೂಗಿ ಗುರುತಿಸಿ ಕಣಕ್ಕಿಳಿಸಿದರೂ ಕೂಡ ಅಲ್ಲಲ್ಲೇ ಅಸಮಾಧಾನ ಹೊಗೆಯಾಡುತ್ತಿದೆ. ಇದರಿಂದ ಎಲ್ಲಾ ವಾರ್ಡ್‍ಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಂಪೂರ್ಣ ವಿಫಲವಾಗಿದ್ದು, ಅಸಮಾಧಾನಿತ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಒಳಗೊಳಗೆ ಪೂರಕವಾಗಿ ಕೆಲಸ ಮಾಡಿದ್ದಾರೆ ಎಂದು ಕೇಳಿ ಬರುತ್ತಿದ್ದು, ಬೆರಳೆಣಿಕೆಯಷ್ಟು ವಾರ್ಡ್‍ಗಳಲ್ಲಿ ಮಾತ್ರ ಕಾಂಗ್ರೆಸ್ ಜೆಡಿಎಸ್‍ಗೆ ಪ್ರಬಲ ಪೈಪೋಟಿ ನೀಡಿದೆ.

ಅಭ್ಯರ್ಥಿಗಳ ಆಯ್ಕೆ ಅಸಮರ್ಪಕ: ಈ ಬಾರಿ ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಹೊತ್ತಿದ್ದ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬಾಗೂರು ಮಂಜೇಗೌಡರು, ಪಕ್ಷದ ಒಂದು ಗುಂಪನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಇದರಿಂದ ವಿಚಲಿತ ರಾದ ಕಾಂಗ್ರೆಸ್‍ನ ಮತ್ತೊಂದು ಗುಂಪು ಜೆಡಿಎಸ್ ಸೇರ್ಪಡೆಯಾಗಿದೆ. ಇನ್ನು ಕೆಲವರು ಶೀಘ್ರದಲ್ಲೇ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣನವರ ಜೊತೆ ಮಾತುಕತೆ ನಡೆಸಿದ್ದು, ಜೆಡಿಎಸ್ ಸೇರಲು ತುದಿಗಾಲಿನಲ್ಲಿದ್ದಾರೆ ಎನ್ನಲಾಗುತ್ತಿದೆ.

ದಲಿತ ಮುಖಂಡರ ಕಡೆಗಣನೆ: ತಾಲೂಕು ಮಾಜಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ದಲಿತ ಮುಖಂಡ ರಂಗಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಾಗೂರು ಮಂಜೇಗೌಡರು, ಏಕಪಕ್ಷಿಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ದಲಿತ ಮುಖಂಡರಿಂದ ಕೇಳಿ ಬಂದಿದ್ದು, ಮೀಸಲು ಕ್ಷೇತ್ರದ ವಾರ್ಡ್‍ಗಳಲ್ಲಿ ಪ್ರಮುಖರನ್ನು ಕಡೆಗಣಿಸಿದ್ದು, ಕಾಂಗ್ರೆಸ್‍ಗೆ ಹಿನ್ನಡೆಯಾಗುವ ಭೀತಿ ಎದುರಾಗಿದೆ.

ನಿಷ್ಠಾವಂತರ ಕಡೆಗಣನೆ: ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನಿಕೊಪ್ಪಲು ಮಂಜೇ ಗೌಡರೂ ಸಹ ಪುರಸಭಾ ಚುನಾವಣೆ ಅಧಿಸೂಚನೆ ಹೊರಡಿಸಿದ ನಂತರವೂ ಯಾವುದೇ ಪೂರ್ವಭಾವಿ ಸಭೆ ಕರೆದು ಪಕ್ಷದವರೊಂದಿಗೆ ಚರ್ಚಿಸಿಲ್ಲ ಹಾಗೂ ಟಿಕೆಟ್ ವಂಚಿತ ಆಕಾಂಕ್ಷಿಗಳು, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೊಸ ಮುಖಗಳಿಗೆ ಹಿಂದೇಟು: ಅತೀ ಹೆಚ್ಚಿನ ದಲಿತ ಮತಗಳಿರುವ 20, 21, 22, 23ನೇ ವಾರ್ಡ್‍ಗಳಲ್ಲಿ ಯುವಕರ ಪ್ರಾಬಲ್ಯ ವಿದ್ದು, ಈ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕವಾಗಿ ಜೆಡಿಎಸ್ ನತ್ತ ಮುಖ ಮಾಡುವ ಸಂಭವವೇ ಹೆಚ್ಚಾ ಗಿದೆ. ಬಾಗೂರು ಮಂಜೇಗೌಡರಿಗೆ ಪಟ್ಟಣದ ಮತದಾರ ಪರಿಚಯವಿಲ್ಲದ ಕಾರಣ ಈ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಹಿಂದೇಟು ಹಾಕಿದ್ದರಿಂದ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿಯೇ ಇದೆ.

ಸಂಘಟನೆ ಕೊರತೆ: ಹಲವಾರು ವಾರ್ಡ್ ಗಳಲ್ಲಿ ಮೀಸಲಾತಿ ಹಾಗೂ ಮಹಿಳೆ ಯರು ಅಭ್ಯರ್ಥಿಗಳಾಗಿರುವುದರಿಂದ ಅಭ್ಯರ್ಥಿಗಳೇ ಸಂಪೂರ್ಣ ಚುನಾವಣಾ ಜವಾಬ್ದಾರಿ ವಹಿಸಿ ಕೊಂಡು ಪ್ರಚಾರ ಸೇರಿದಂತೆ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಟಿಕೆಟ್ ಹಂಚಿಕೆ ವಿಚಾರದಲ್ಲೂ ಕಾಂಗ್ರೆಸ್ ನಾಯಕಿ ಅನುಪಮಾ ಮತ್ತು ಪುತ್ರ ಜಿಪಂ ಸದಸ್ಯ ಶ್ರೇಯಸ್ ಪಟೇಲ್‍ರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ಕಾಂಗ್ರೆಸ್‍ಗೆ ದೊಡ್ಡ ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

ಪ್ರಚಾರದಿಂದ ದೂರ: ಇನ್ನೂ ಜಿಪಂ ಸದಸ್ಯ ಶ್ರೇಯಸ್ ಪಟೇಲ್ ಪಟ್ಟಣದಲ್ಲಿ ತನ್ನದೇ ಆದ ಯುವಕರ ಪಡೆ ಹೊಂದಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಿ ಕೊಪ್ಪಲು ಮಜೇಗೌಡರು, ವಿಧಾನಸಭಾ ಪರಾಜಿತ ಅಭ್ಯರ್ಥಿ ಬಾಗೂರು ಮಂಜೇ ಗೌಡರು ಕಡೆಗಣಿಸಿರುವ ಕಾರಣ ಚುನಾವಣಾ ಪ್ರಚಾರದಿಂದ ದೂರ ಉಳಿದರಲ್ಲದೆ, ಈ ಸ್ಥಳೀಯ ಚುನಾವಣೆಯಲ್ಲಿ ಸಕ್ರಿಯ ವಾಗಿ ಭಾಗವಹಿಸಿಲ್ಲ ಎನ್ನಲಾಗಿದೆ.

20 ವರ್ಷಗಳಿಂದ ಸ್ಥಳೀಯ ಸಂಸ್ಥೆಯ ಅಧಿಕಾರ ಹಿಡಿದಿರುವ ಜೆಡಿಎಸ್ ಮಣಿಸಲು ಏನೇ ಒಳಒಪ್ಪಂದ ಮಾಡಿಕೊಂಡಿದ್ದರೂ ಅಸಮಾಧಾನಿತರ ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವುದರಿಂದ ಕಾಂಗ್ರೆಸ್‍ಗೆ ಹಿನ್ನಡೆ ಯಾಗುವುದರಲ್ಲಿ ಯಾವುದೇ ಅನುಮಾನ ವಿಲ್ಲ. ಇನ್ನೂ ಬಿಜೆಪಿ ನಾಮಕಾವಸ್ಥೆಗಷ್ಟೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲವಾಗಿದ್ದು, ಇದೆಲ್ಲಾ ಜೆಡಿಎಸ್‍ಗೆ ವರವಾಗಿ ಪರಿಣಮಿಸಲಿದೆ.

Translate »