ನಗರ ಪ್ರದೇಶದ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ವಿದ್ಯುನ್ಮಾನ ಭೂ ನಕಾಶೆ ತಯಾರಿ
ಮೈಸೂರು

ನಗರ ಪ್ರದೇಶದ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ವಿದ್ಯುನ್ಮಾನ ಭೂ ನಕಾಶೆ ತಯಾರಿ

October 26, 2018

ಬೆಂಗಳೂರು: ನಗರ ಪ್ರದೇಶಗಳಲ್ಲಿ ಒತ್ತುವರಿ ಭೂಮಿ ತೆರವಿಗೆ ಭೌಗೋಳಿಕ ನಕಾಶೆ ಸಿದ್ಧಪಡಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ 10 ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೂ ನಕಾಶೆ ಸಿದ್ಧಗೊಳ್ಳಲಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಯಾಗಿದ್ದು, ಇದನ್ನು ತೆರವುಗೊಳಿಸುವ ಮೊದಲ ಹೆಜ್ಜೆಯಾಗಿ ವಿದ್ಯುನ್ಮಾನ ನಕಾಶೆ ಹೊರಬರಲಿದೆ.
ಈ ನಕ್ಷೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಜೊತೆಗೆ ಸರ್ಕಾರಿ ಭೂಮಿ ಎಲ್ಲೆಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.

ಸರ್ಕಾರಿ ಭೂಮಿ ಎಂಬುದಾಗಿ ದಾಖಲೆಯಲ್ಲಿದ್ದರೂ ಭೂ ಮಾಫಿಯಾಗಳು ನಕಲಿ ಕಾಗದ ಪತ್ರ ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಂಡಿರುವುದಲ್ಲದೆ, ಪರಭಾರೆಯನ್ನೂ ಮಾಡಿದ್ದಾರೆ. ಕೆಲವು ನಗರಗಳಲ್ಲಂತೂ ಸಾರ್ವಜನಿಕ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಸ್ಥಳ ಖರೀದಿ ಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಮೂವರು ತಜ್ಞರ ಸಮಿತಿ ಪ್ರತ್ಯೇಕ ವರದಿಗಳನ್ನು ನೀಡಿದ್ದರೂ, ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ನಕಾಶೆ ಮೂಲಕ ಪತ್ತೆ ಹಚ್ಚಿ ಕೋಟ್ಯಾಂತರ ರೂ. ಮೌಲ್ಯದ ಒತ್ತು ವರಿ ಭೂಮಿಯನ್ನು ಮಾಫಿಯಾಗಳಿಂದ ವಶಪಡಿಸಿಕೊಳ್ಳು ವುದೇ ಇದರ ಮೂಲ ಉದ್ದೇಶವಾಗಿದೆ. ನಗರ ಪ್ರದೇಶಗಳಿಗೆ ವಲಸೆ ತಪ್ಪಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲೇ ಗುಡಿ ಕೈಗಾರಿಕೆಗೆ ಒತ್ತು ಕೊಡಲು ಸರ್ಕಾರ ಮುಂದಾಗಿದೆ.

ಬಂಜರು ಭೂಮಿ ಉದ್ಯಮ ವಲಯ: ಗ್ರಾಮೀಣ ಪ್ರದೇಶ ದಲ್ಲಿ ಲಭ್ಯವಿರುವ 100ರಿಂದ 200 ಎಕರೆಯಷ್ಟು ಬಂಜರು ಅಥವಾ ಒಣಭೂಮಿ ವಶಪಡಿಸಿಕೊಂಡು ಉದ್ಯಮ ವಲಯ ಗಳನ್ನಾಗಿ ಪರಿವರ್ತಿಸಲು ಸಂಪುಟ ಸಭೆ ಸಮ್ಮತಿಸಿದೆ.

ಇದಕ್ಕಾಗಿ ಕರ್ನಾಟಕ ಭೂಸುಧಾರಣಾ ಕಾಯಿದೆ 1961ರ ವಿಧಿ 109ರಡಿ ಅಧಿಸೂಚನೆ ಹೊರಡಿಸಲು ಮುಂದಾಗಿದೆ. ರಾಜಧಾನಿ ಸೇರಿದಂತೆ ವಿವಿಧ ನಗರ-ಪಟ್ಟಣಗಳಿಗೆ ದಿನನಿತ್ಯ ಉದ್ಯೋಗ ಅರಸಿ ಯುವಜನರು ವಲಸೆ ಬಂದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

ಉದ್ಯೋಗ ಅರಸಿ ಬಂದ ಕೆಲವು ಯುವಜನರು ದಾರಿ ತಪ್ಪಿ ಗೂಂಡಾಗಿರಿ ಮತ್ತು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಪ್ಪಿಸಿ ಸ್ಥಳೀಯವಾಗಿ ಸ್ವ-ಉದ್ಯೋಗ ಸೃಷ್ಟಿ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ರೈತರಿಂದ ಬಂಜರು ಭೂಮಿ ಖರೀದಿ ಮಾಡುವುದು ಈ ಕಾಯಿದೆಯ ಉದ್ದೇಶ.

ರಾಗಿ ವಿತರಣೆಗೆ ಕ್ರಮ: ಬೆಂಬಲ ಬೆಲೆಯಲ್ಲಿ ರೈತರಿಂದರಾಗಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಿಸಲು ಸರ್ಕಾರ ಅನುಮತಿ ನೀಡಿದೆ. ನಗರ ಪ್ರದೇಶಗಳಲ್ಲಿ ಹೊಸದಾಗಿ 250 ಅಂಗನವಾಡಿ ಕೇಂದ್ರಗಳನ್ನು 17.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ. ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆ: ಹಾಸನ ವೈದ್ಯಕೀಯ ಕಾಲೇಜು ಆವರಣದಲ್ಲಿ 141.20 ಕೋಟಿ ರೂ. ವೆಚ್ಚದಲ್ಲಿ 400 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಲು ಮಂತ್ರಿಮಂಡಲ ಅನುಮತಿ ಕೊಟ್ಟಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ನಿರ್ಮಿಸಿರುವ ಬಿಆರ್‍ಟಿಎಸ್ ಯೋಜನೆಗೆ ಪೂರಕವಾಗಿ ಪ್ರತ್ಯೇಕ ನಗರ ಸಾರಿಗೆ ಸಂಸ್ಥೆ ರಚನೆಗೆ ಸಮ್ಮತಿಸಿದೆ. ಆಡಳಿತ ನ್ಯಾಯಮಂಡಳಿಗೆ ಸದಸ್ಯರ ನೇಮಕ ಅಧಿಕಾರವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಸಂಪುಟ ಸಭೆ ನೀಡಿದೆ.

Translate »