ಉತ್ತರಪ್ರದೇಶ ಆಧುನಿಕ ಸತಿ ಸಾವಿತ್ರಿಯರ ಆಘಾತಕಾರಿ ಕಥೆ!
ಮೈಸೂರು

ಉತ್ತರಪ್ರದೇಶ ಆಧುನಿಕ ಸತಿ ಸಾವಿತ್ರಿಯರ ಆಘಾತಕಾರಿ ಕಥೆ!

November 18, 2018

ಲಖನೌ:  ಕಾಲ ಬದಲಾಗಿದೆ. ಯಮನೊಡನೆ ಹೋರಾಡಿ ಸತ್ತ ಪತಿಯನ್ನು ಬದುಕಿಸಿಕೊಂಡ ಸತ್ಯವಾನ್ ಸಾವಿತ್ರಿಯ ನಾಡಾದ ಭರತ ಖಂಡದಲ್ಲಿ, ಸರ್ಕಾರದಿಂದ ಪಿಂಚಣಿ ಹಣಕ್ಕಾಗಿ ಬದುಕಿರುವ ಗಂಡನನ್ನೇ ದಾಖಲೆಗಳಲ್ಲಿ `ಸಾಯಿಸಿ’ದ ಪತ್ನಿಯರೂ ಇದ್ದಾರೆ. ಇದು ಆಧುನಿಕ ಕಾಲದ ಸತಿ ಸಾವಿತ್ರಿಯರ ಆಘಾತಕಾರಿ ಕಥೆ!

ಅಲ್ಪಾಯು ಸತ್ಯವಾನನನ್ನು ಸಾವಿತ್ರಿ ವರಿಸುತ್ತಾಳೆ. ಮದುವೆಯ ಬೆನ್ನಿಗೇ ಪತಿ ಸಾಯುತ್ತಾನೆ. ಯಮಧರ್ಮ ಸತ್ಯವಾನನ ಪ್ರಾಣವನ್ನು ಸೆಳೆದೊಯ್ಯುವಾಗ ಬಿಡದೇ ಹಿಂಬಾಲಿಸುವ ಸತಿ ಸಾವಿತ್ರಿ, ಕಾಲಪುರುಷನೊಡನೆ ಸುದೀರ್ಘ ವಾದ ನಡೆಸಿ, ಕೊನೆಗೂ ಗೆದ್ದು ಪತಿಯನ್ನು ಬದುಕಿಸಿಕೊಳ್ಳುತ್ತಾಳೆ. ಇದು ಸತ್ಯವಾನ್ ಸಾವಿತ್ರಿ ಪುರಾಣ ಪ್ರಸಂಗ. ಆದರೆ, ಉತ್ತರ ಪ್ರದೇಶದ ಕಥೆ ಬೇರೆಯದೇ ಇದೆ. ಅದು ಹೆಸರಿಗಷ್ಟೇ ಸೀತಾಪುರ. ಆದರೆ ಅಲ್ಲಿನ ಸತೀಮಣಿಯರು ಪತಿರಾಯ, ಕುಟುಂಬ ಮತ್ತು ಸರ್ಕಾರವನ್ನು ವಂಚಿಸುವುದರಲ್ಲಿ ಬಲು ನಿಪುಣರು. ರಾಜ್ಯ ಸರಕಾರ ನೀಡುವ ವಿಧವಾ ಪಿಂಚಣಿಯನ್ನು ಪಡೆದುಕೊಳ್ಳುವ ಸಲುವಾಗಿ ಸೀತಾಪುರದ ಹಲವು ಕಿಲಾಡಿ ಹೆಂಡತಿಯರು `ಪತಿ ನಿಧನನಾಗಿದ್ದಾನೆ’ ಎಂದು ನಕಲಿ ದಾಖಲೆ ಸೃಷ್ಟಿಸಿ ಅದೆಷ್ಟೋ ತಿಂಗಳಿಂದ ವಿಧವಾ ಪಿಂಚಣಿ ಪಡೆಯುತ್ತಿದ್ದಾರೆ!

ಪತ್ನಿಯರು ಮಾಡುತ್ತಿರುವ ಈ ವಂಚನೆಯನ್ನು ಪತ್ತೆ ಹಚ್ಚಿರುವುದು ಸ್ವತಃ ಅವರ ಗಂಡಂದಿರೇ ಎಂಬುದೇ ವಿಶೇಷ! ಸೀತಾಪುರ ಸಮೀಪದ ಬಟ್ಸರ್‍ಗಂಜ್‍ನ ಸಂದೀಪ್ ಕುಮಾರ್ ಎಂಬ ಪತಿರಾಯ, ತನ್ನ ಪತ್ನಿಯ ಮೊಬೈಲ್‍ಗೆ ಬ್ಯಾಂಕ್‍ನಿಂದ ಎಸ್‍ಎಂಎಸ್ ಬಂದಿದ್ದನ್ನು ಕಂಡು ಅಚ್ಚರಿಗೊಂಡಿದ್ದಾನೆ. ಪರಿಶೀಲಿಸಿದಾಗ, ಅದು ಪತ್ನಿಯ ಖಾತೆಗೆ ಹಣ ಜಮಾ ಆಗಿರುವ ಸಂದೇಶವಾಗಿದೆ. ಕುತೂಹಲಗೊಂಡ ಸಂದೀಪ್. ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದ್ದಾನೆ. ಆಗ ಪತ್ನಿಯ ಖಾತೆಗೆ ಸರ್ಕಾರದಿಂದ 3 ಸಾವಿರ ರೂ. ವಿಧವಾ ಪಿಂಚಣಿ ಬಂದಿರುವುದು ಗೊತ್ತಾಗಿದೆ. `ನಾನು ಜೀವಂತವಾಗಿರುವಾಗಲೇ ಪತ್ನಿ ವಿಧವಾ ಪಿಂಚಣಿ ಪಡೆಯುತ್ತಿದ್ದಾಳಲ್ಲಾ’ ಎಂದು ಆತನಿಗೆ ಆಘಾತವಾಗಿದೆ. ಮತ್ತಷ್ಟು ವಿವರವಾಗಿ ಪರಿಶೀಲನೆ ನಡೆಸಿದಾಗ, ತನ್ನ ಪತ್ನಿಯಷ್ಟೇ ಅಲ್ಲ, ಅತ್ತೆ ಹಾಗೂ ಅತ್ತಿಗೆಯೂ ‘ಪತಿ ಸತ್ತಿದ್ದಾನೆ’ ಎಂದು ನಕಲಿ ದಾಖಲೆ ಸೃಷ್ಟಿಸಿ ವರ್ಷಗಳ ಕಾಲದಿಂದ ವಿಧವಾ ಪಿಂಚಣಿ ಪಡೆಯುತ್ತಿರುವುದು ಬಹಿರಂಗಗೊಂಡಿದೆ. ಅಲ್ಲದೆ, ಗ್ರಾಮದ 22 ಮಹಿಳೆಯರು ಹೀಗೆ ಸುಳ್ಳು ಸುಳ್ಳೇ ವಿಧವಾ ಪಿಂಚಣಿ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಪ ಹಣಕ್ಕಾಗಿ ಬದುಕಿರುವ ಗಂಡಂದಿರನ್ನೇ ಇವರೆಲ್ಲಾ `ಸಾಯಿಸಿ’ದರಲ್ಲ (ದಾಖಲೆಗಳಲ್ಲಿ) ಎಂದು ಸಂದೀಪ್‍ಗೆ ಬಹಳ ನೋವಾಗಿದೆ. ತಕ್ಷಣವೇ ಆತ ಅಧಿಕಾರಿಗಳಿಗೆ ದೂರು ನೀಡಿದ್ದಾನೆ.
ವಾಸ್ತವ ಸಂಗತಿ ತಿಳಿದು ಅಧಿಕಾರಿಗಳಿಗೂ ತಲೆಕೆಟ್ಟಂತಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಆರಂಭಗೊಂಡಿದೆ. ಮಾಹಿತಿ ತಿಳಿದ ಜಿಲ್ಲಾಧಿಕಾರಿ ಸೀತಾ ವರ್ಮಾ ಅವರೂ ಆಶ್ಚರ್ಯಚಕಿತರಾಗಿದ್ದಾರೆ. `ಇದೇ ಮಾದರಿಯಲ್ಲಿ ಸರಕಾರಕ್ಕೆ ವಂಚಿಸು ತ್ತಿದ್ದ ಕಿಲಾಡಿ ಪತ್ನಿಯರ (ನಕಲಿ ವಿಧವೆಯರ) ಸಂಖ್ಯೆ ಹೆಚ್ಚಿರುವ ಸಾಧ್ಯತೆಗಳಿವೆ. ವ್ಯಾಪಕ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

Translate »