ಮೈಸೂರು: ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಕಳ್ಳ ಹಾಗೂ ಕಳವು ಮಾಲುಗಳನ್ನು ಸ್ವೀಕರಿಸಿದ್ದ ಚಿನ್ನದಂಗಡಿ ಮಾಲೀಕನನ್ನು ಬಂಧಿಸಿರುವ ಅಪರಾಧ ಪತ್ತೆ ದಳ ಹಾಗೂ ಕುವೆಂಪುನಗರ ಪೊಲೀಸರು, 3.80 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ರಾಮಕೃಷ್ಣನಗರದ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಬನ್ನಿಮಂಟಪದ ಯಲ್ಲಮ್ಮ ಕಾಲೋನಿಯ ಮಯೂರ ಬಿನ್ ಲೇಟ್ ನಾಗಯ್ಯ (37) ಎಂಬಾತನನ್ನು ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆತ ರಾಮಕೃಷ್ಣನಗರದ ಶನೇಶ್ವರಸ್ವಾಮಿ ದೇವಸ್ಥಾನ ಮತ್ತು ಅಶೋಕಪುರಂನ ಮರುಳೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾಗಿ ತಿಳಿಸಿದ ಮೇರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಆತನಿಂದ 3.80 ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣ, 240 ಗ್ರಾಂ ಬೆಳ್ಳಿ ಪದಾರ್ಥ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ ಆರೋಪಿ ಮಯೂರನಿಂದ ಕಳವು ಚಿನ್ನಾಭರಣ ಮತ್ತು ಬೆಳ್ಳಿ ಪಧಾರ್ಥಗಳನ್ನು ಸ್ವೀಕರಿಸಿದ್ದ ಆರೋಪದ ಮೇಲೆ ಮೈಸೂರಿನ ಮೇಟಗಳ್ಳಿ ಬಿಎಂಶ್ರೀ ನಗರದ ಬಾಲಾಜಿ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರ್ಸ್‍ನ ಮಾಲೀಕ ಲಕ್ಷ್ಮಣ ಬಿನ್ ಲೇಟ್ ಸುಜಾರಾಂಜೀ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಯೂರ್ ಈ ಹಿಂದೆಯೂ ಕುವೆಂಪುನಗರ, ನಜûರ್‍ಬಾದ್, ಮಂಡ್ಯ ಗ್ರಾಮಾಂತರ, ರಾಮನಗರ, ಕನಕಪುರ ಠಾಣಾ ವ್ಯಾಪ್ತಿಯಲ್ಲಿಯೂ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಮಯೂರ್‍ನ ಸಹಚರರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿ ದ್ದಾರೆ. ಕೃಷ್ಣರಾಜ ವಿಭಾಗದ ಎಸಿಪಿ ಎಂ.ಧರ್ಮಪ್ಪ ನೇತೃತ್ವದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಾಜು, ಪಿಎಸ್‍ಐ ಕೆ.ರಘು, ಎಎಸ್‍ಐ ಸೋಮೇ ಗೌಡ, ಕೆ.ಆರ್.ವಿಭಾಗದ ಎಸಿಪಿ ಅವರ ಅಪರಾಧ ಪತ್ತೆ ದಳದ ಸಿಬ್ಬಂದಿ ಎಸ್.ಮಹದೇವ, ಸಿಐ ಮೊಕದ್ದರ್ ಷರೀಪ್, ಸುನೀಲ್ ರಾಧೇಶ್, ಸಾಗರ್, ರಾಮೇಗೌಡ, ಆದರ್ಶ, ರಫೀಕ್‍ಉಲ್ಲಾ ಪ್ರಕರಣ ಪತ್ತೆ ಹಚ್ಚುವಲ್ಲಿ ಭಾಗವಹಿಸಿದ್ದಾರೆ.