ಸೋಮವಾರಪೇಟೆ: ಹೆಚ್.ಡಿ.ಕುಮಾರಸ್ವಾಮಿ ಅವರು ಕೇವಲ ಮಂಡ್ಯ ಮತ್ತು ಹಾಸನಕ್ಕೆ ಮುಖ್ಯಮಂತ್ರಿಗಳು ಎಂದು ತಿಳಿದುಕೊಂಡಿದ್ದು, ಕೊಡಗಿಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ದೂರಿದರು.
ಜೇಸಿ ವೇದಿಕೆಯಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಗೆ 5 ಸಾವಿರ ಕೋಟಿ ರೂ., ಹಾಸನಕ್ಕೆ 6 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಆದರೆ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕೊಡಗಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಂತ್ರಸ್ತರ ಸಂಕಷ್ಟಕ್ಕೆ ದಾನಿಗಳು 231 ಕೋಟಿ ರೂ.ಗಳಷ್ಟು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಅದನ್ನು ಕೂಡ ಜಿಲ್ಲೆಯ ಸಂತ್ರಸ್ತರಿಗೆ ನೀಡಿಲ್ಲ ಎಂದು ದೂರಿದರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‍ನಲ್ಲಿ ನೆಹರು ಕುಟುಂಬ ರಾಜಕಾರಣ ಮಾಡುತ್ತಿದ್ದರೆ, ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರ ಕುಟುಂಬ ರಾಜಕಾರಣ ಮಾಡುತ್ತಿದೆ. 7 ರಲ್ಲಿ ಮೂರು ಕ್ಷೇತ್ರಗಳನ್ನು ಗೌಡರ ಕುಟುಂಬ ಪಡೆದಿದೆ. ಹಾಸನ ಮತ್ತು ಮಂಡ್ಯದ ಜೆಡಿಎಸ್‍ನಲ್ಲಿ ಬೇರೆ ನಾಯಕರಿಲ್ಲವೆ? ಎಂದು ಪ್ರಶ್ನಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ, ಶಾಂತಳ್ಳಿ, ಮಾದಾ ಪುರ ಹೋಬಳಿಗಳು ಉಳಿಯುವುದಿಲ್ಲ. ಈ ಹಿಂದೆ ವಿಜಯ ಶಂಕರ್ ಅರಣ್ಯ ಸಚಿವರಾಗಿದ್ದ ಸಂದರ್ಭ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸದ ಪರಿಣಾಮ ಈಗ ಕೊಡಗಿನ ಜನರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
ಐದು ವರ್ಷಗಳಲ್ಲಿ ಕಳಂಕ ರಹಿತ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಪ್ರತಿ ಯೊಬ್ಬರು ಶ್ರಮಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ ಹೇಳಿದರು. ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಬಿಜೆಪಿಯನ್ನು ಕೋಮುವಾದಿಗಳೆಂದು ಜರಿಯುವ ನೈತಿಕತೆ ಇಲ್ಲ. ಈ ಹಿಂದೆ ಬಿಜೆಪಿ ಪಕ್ಷದಲೇ ಮಂತ್ರಿಯಾಗಿ, ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಕಾಂಗ್ರೆಸ್ ಸೇರ್ಪಡೆಯಾದ ನಂತರ ಬಿಜೆಪಿ ಕೋಮುವಾದಿ ಯಾಗಿದೆ. ಇಂತಹ ರಾಜಕಾರಣಿ ಗಳಿಗೆ ಮತದಾರರೆ ಬುದ್ಧಿ ಕಲಿಸಬೇಕೆಂದು ಹೇಳಿದರು.
ಅಮೇಥಿಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್‍ನ ರಾಹುಲ್ ಗಾಂಧಿ ಕೇರಳದ ವಯನಾಡಿಯಲ್ಲಿ ಸ್ಪರ್ಧಿಸಿದ್ದಾರೆ. ಈ ಬಾರಿ ಎರಡು ಕಡೆಯಲ್ಲೂ ಸೋಲಲಿದ್ದಾರೆ ಎಂದು ನುಡಿದರು. ಪ್ರತಿನಿತ್ಯ ಕಚ್ಚಾಟದಲ್ಲೇ ದಿನ ಕಳೆಯಿತ್ತಿರುವ ರಾಜ್ಯದ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.
ಚಿತ್ರನಟ ಸುನೀಲ್ ಪುರಾಣಿಕ್ ಮಾತನಾಡಿ, ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಮೂಲಕ ವಿರೋಧಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಬಲಿಷ್ಠ ಭಾರತದ ಕನಸುಗಳಿವೆ. ಇದಕ್ಕೋಸ್ಕÀರ ಅನೇಕ ಯೋಜನೆಗಳನ್ನು ಹಾಕಿಕೊಂಡಿ ದ್ದಾರೆ. ಆ ಯೋಜನೆಗಳು ಕಾರ್ಯರೂಪಕ್ಕೆ ತರಲು ಇನ್ನೊಮ್ಮೆ ಅವರನ್ನು ಪ್ರಧಾನಿ ಸ್ಥಾನವನ್ನು ಕಲ್ಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಹಿಳಾ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಸುಮಾ ಸುದೀಪ್, ಜಿಲ್ಲಾಧ್ಯಕ್ಷೆ ಯಮುನ ಚಂಗಪ್ಪ, ಬಿಜೆಪಿ ವಕ್ತಾರ ಎಂ.ಬಿ.ಅಭಿಮನ್ಯುಕುಮಾರ್, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಪ್ರಭಾಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪ್ರಮುಖರಾದ ಬಿ.ಜೆ.ದೀಪಕ್, ಸುಂದರಮ್ಮ, ಮಂಜುಳ, ಬಿ.ಡಿ.ಮಂಜುನಾಥ್, ಜಲಜಾ ಶೇಖರ್, ಬಿ.ಆರ್.ಮಹೇಶ್, ಪಿ.ಕೆ.ಚಂದ್ರು ಮತ್ತಿತರರು ಇದ್ದರು.