ಮೈಸೂರು: ಮೈಸೂ ರಿನ ಬನ್ನಿಮಂಟಪದಲ್ಲಿರುವ ಜಿಲ್ಲಾ ಜವಾಹರ ಬಾಲ ಭವನದಲ್ಲಿ ಬುಧವಾರ ದಿಂದ ಆರಂಭವಾದ ಬೇಸಿಗೆ ಶಿಬಿರದಲ್ಲಿ 85ಕ್ಕೂ ಹೆಚ್ಚು 7ರಿಂದ 14 ವರ್ಷದ ಶಾಲಾ ಮಕ್ಕಳು ಪಾಲ್ಗೊಂಡಿದ್ದು, ವಿವಿಧ ಕಲಿಕಾ ಹಾಗೂ ಮನರಂಜನಾ ಚಟು ವಟಿಕೆಯಲ್ಲಿ ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷ ಬಾಲಭವನದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತದೆ. ಇಂದು ಆರಂಭ ವಾದ ಮಕ್ಕಳ ಬೇಸಿಗೆ ಶಿಬಿರವನ್ನು ಸಿಡಿ ಪಿಒ ಮಂಜುಳಾ ಪಾಟೀಲ್ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ಜಿಲ್ಲಾ ಜವಾಹರ ಬಾಲ ಭವನದಲ್ಲಿ ಪ್ರತಿ ವರ್ಷ 7ರಿಂದ 14 ವರ್ಷದ ಮಕ್ಕಳಿಗೆ 15 ದಿನಗಳ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಪಠ್ಯೇತರ ಚಟುವಟಿಕೆಯನ್ನು ಕಲಿಸಲಾಗು ತ್ತದೆ. ಪರೀಕ್ಷೆ ಮುಗಿದ ಮಕ್ಕಳು ಬೇಸಿಗೆ ರಜೆಯಲ್ಲಿ ಸೃಜನಾತ್ಮಕವಾದ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವ ರಲ್ಲ್ಲಿ ಕಲಿಕಾ ಕೌಶಲ್ಯ ಹೆಚ್ಚಾಗುತ್ತದೆ ಎಂದರು.
ಶಿಕ್ಷಕಿ ಎಸ್. ಶ್ಯಾಮಲಾ ಮಾತನಾಡಿ, ಇಂದಿನಿಂದ ಆರಂಭವಾದ ಬೇಸಿಗೆ ಶಿಬಿರ ಮೇ 9ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿವಿಧ ತರಗತಿ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳನ್ನು ಮಾವು, ಬೇವು, ಆಲ, ಹೊಂಗೆ ಹೆಸರಿನಲ್ಲಿ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಜನಪದ ನೃತ್ಯ, ಜನ ಪದ ಗೀತೆ, ಸಮೂಹ ನೃತ್ಯ, ಪಾಶ್ಚಾತ್ಯ ನೃತ್ಯ, ಕ್ಲೆ ಮಾಡಲಿಂಗ್, ಚಿತ್ರಕಲೆ, ವರ್ಣ ಚಿತ್ರ, ಪೇಪರ್‍ನಲ್ಲಿ ಮಾಡುವ ಕಲಾಕೃತಿ ಸೇರಿದಂತೆ ಇನ್ನಿತರ ಚಟುವಟಿಕೆಯನ್ನು ಹೇಳಿಕೊಡಲಾಗುತ್ತದೆ. ಇದರೊಂದಿಗೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತಂತೆ ವಿವಿಧ ತಜ್ಞರಿಂದ ಅರಿವು ಕಾರ್ಯಕ್ರಮ ನಡೆಸಲಾಗುತ್ತದೆ. ಮಕ್ಕಳನ್ನು ಪ್ರಾದೇಶಿಕ ಪ್ರಾಕೃತಿಕ ವಸ್ತು ಸಂಗ್ರಹಾಲಯ, ಹಾಲಿನ ಡೈರಿಗೆ ಕರೆದೊಯ್ದು ಮಾಹಿತಿ ವಿನಿಮಯ ಮಾಡಲಾಗುತ್ತದೆ. ಒಂದು ದಿನ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಪ್ರಾತ್ಯ ಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಬೇಸಿಗೆ ಶಿಬಿರದ ಶಿಕ್ಷಕರಾದ ನಮಿತಾ, ಗಿರಿಜಾ, ತಮಿಳ್ ಸೆಲ್ವಿ, ಆದರ್ಶ ಹಾಗೂ ಇನ್ನಿತರರು ಉಪಸ್ಥಿತರಿದ್ದರು.