ಮೈಸೂರು: ಬೇಸಿಗೆ ಕಾಲದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನೀಗಲು ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳು ವುದರ ಜತೆಗೆ ನೀರಿನ ಅಭಾವ ಹೆಚ್ಚಾಗಿರುವ ಪ್ರದೇಶ ಗಳಿಗೆ ಹೆಚ್ಚುವರಿ ನೀರು ಪೂರೈಸಲಾಗುತ್ತಿದೆ.
ಮೈಸೂರು ನಗರದ ಜನಸಂಖ್ಯೆಗೆ ಅನುಗುಣ ವಾಗಿ ದಿನಂಪ್ರತಿ ತಲಾವಾರು 135 ಲೀಟರ್‍ನಂತೆ 175.50 ಎಂಎಲ್‍ಡಿ(ಮಿಲಿಯನ್ ಲೀಟರ್ ಪರ್ ಡೇ)ನೀರಿನ ಅಗತ್ಯವಿದ್ದು, ಒಟ್ಟಾರೆ ನಗರಕ್ಕೆ 241.50 ಎಂಎಲ್‍ಡಿ ನೀರಿನ ಅಗತ್ಯತೆ ಇದೆ ಎಂದು ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ವಾಣಿವಿಲಾಸ ನೀರು ಸರಬರಾಜು ಕಾರ್ಯಾ ಗಾರದ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ನಗರಪಾಲಿಕೆಯಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆ 24.00 ಎಂಎಲ್‍ಡಿ, 52 ಹಳ್ಳಿಗಳಿಗೆ 10.00 ಎಂಎಲ್‍ಡಿ, ಚಾಮುಂಡಿಬೆಟ್ಟ ಮತ್ತು ರೆವಿನ್ಯೂ ಬಡಾವಣೆಗೆ 01.00 ಎಂಎಲ್‍ಡಿ, ಆರ್.ಎಂ.ಪಿ.ವಸತಿ ಗೃಹಗಳಿಗೆ 02.50 ಎಂಎಲ್‍ಡಿ, ಕೆ.ಹೆಚ್‍ಬಿ ಕಾಲೋನಿಗೆ 02.50 ಎಂಎಲ್‍ಡಿ, ಗೃಹಬಳಕೆ ಮತ್ತು ಗೃಹೇತರ ಬಳಕೆಗೆ(ನಗರಕ್ಕೆ) 180.00 ಎಂಎಲ್‍ಡಿ ಹಾಗೂ ನೀರಿನ ವಿತರಣೆಯಲ್ಲಿ ಉಂಟಾಗುವ ಸೋರಿಕೆ 26.00 ಎಂಎಲ್‍ಡಿ ಸೇರಿದಂತೆ ದಿನಕ್ಕೆ 225.00 ಎಂಎಲ್‍ಡಿ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದರು.
ನಗರದಲ್ಲಿ 531 ಕೈ ಪಂಪುಗಳು ಹಾಗೂ 803 ವಿದ್ಯುತ್ ಪಂಪುಗಳಿಂದಲೂ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಬೇಸಿಗೆ ಕಾಲವಾದ್ದ ರಿಂದ ಹಾಲಿ ಇರುವ 20 ಟ್ಯಾಂಕರ್‍ಗಳ ಜತೆಗೆ 5 ಟ್ಯಾಂಕರ್ ಹೆಚ್ಚುವರಿಯಾಗಿ ಬಳಕೆ ಮಾಡು ತ್ತಿದ್ದೇವೆ ಎಂದು ಹೇಳಿದರು.
ಸಾಮಾನ್ಯವಾಗಿ ನಗರದ 30 ರಿಂದ 39ನೇ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಭಾಗದಲ್ಲಿ ಹೆಚ್ಚಿನ ಜನರು ವಾಸವಾಗಿದ್ದು, ನೀರಿನ ಅಗತ್ಯತೆಯೂ ಕೂಡ ಹೆಚ್ಚಾಗಿದೆ. ಆದ್ದ ರಿಂದ ನಿಗದಿತ ನೀರಿನ ಪೂರೈಕೆಯೊಂದಿಗೆ ಟ್ಯಾಂಕ ರ್‍ಗಳ ಮೂಲಕವು ನೀರನ್ನು ನೀಡಲಾಗುತ್ತಿದೆ.
ನಗರವನ್ನು ಹೊರತುಪಡಿಸಿ ಹಿನಕಲ್, ಬೋಗಾದಿ, ಹೂಟಗಳ್ಳಿ ಸೇರಿದಂತೆ 52 ಹಳ್ಳಿಗಳಿಗೆ ವಾಣಿವಿಲಾಸ ವಾಟರ್ ವಕ್ರ್ಸ್ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ. ಹಿನಕಲ್‍ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸದ್ಯ ಐದು ಟ್ಯಾಂಕರ್‍ಗಳಿಂದ ನೀರು ವಿತರಣೆ ಮಾಡ ಲಾಗುತ್ತಿದೆ ಎಂದು ತಿಳಿಸಿದರು.
ವಿಜಯನಗರ 2ನೇ ಹಂತದಲ್ಲಿ ಶಿಥಿಲವಾಗಿ ರುವ ಕೇಂದ್ರ ಜಲಸಂಗ್ರಹಾಗಾರದ ದುರಸ್ತಿ ಕಾಮಗಾರಿ, ಮೇಳಾಪುರ ಮತ್ತು ರಮ್ಮನಹಳ್ಳಿ ಯಂತ್ರಾಗಾರಗಳಲ್ಲಿ ಇರುವ ಪಂಪ್‍ಸೆಟ್‍ಗಳನ್ನು ಬದಲಾಯಿಸುವ ಕಾಮಗಾರಿ, ದೇವನೂರು ಜಲ ಸಂಗ್ರಹಾಗಾರದಿಂದ ಜರ್ಮನ್ ಪ್ರೆಸ್(ಯರ ಗನಹಳ್ಳಿ) ಜಲಸಂಗ್ರಹಾಗಾರದ ಆವರಣದವರೆಗೆ ಹಾಲಿ ಇರುವ 100 ಮಿ.ಮೀ ವ್ಯಾಸದ ಪಿ.ಎಸ್.ಸಿ ಕೊಳವೆ ಬದಲಾಗಿ 1168 ಮಿ.ಮೀ ವ್ಯಾಸದ ಕೊಳವೆಯನ್ನು ಅಳವಡಿಸುವ ಕಾಮಗಾರಿ ಹಾಗೂ ಜೆ.ಎನ್.ನರ್ಮ್ ಪರಿವರ್ತನೆ ಯೋಜನೆಯಡಿ ನಡೆಯುತ್ತಿರುವ 24×7 ಕುಡಿಯುವ ನೀರು ಸರಬರಾಜು ಕಾಮಗಾರಿಗಳು ಪೂರ್ಣಗೊಂಡರೆ ಮತ್ತಷ್ಟು ಸಮರ್ಪಕವಾಗಿ ನೀರು ಪೂರೈಕೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಉಂಟಾಗುವ ನೀರಿನ ಸಮಸ್ಯೆಗಳಿಗೆ ಕಾರಣಗಳು: ನೀರನ್ನು ಮಿತವಾಗಿ ಬಳಸಲು ಅಗತ್ಯ ವಾಗಿರುವ ಮೀಟರ್‍ಗಳನ್ನು ಅಳವಡಿಸದೆ ಇರು ವುದು. ನೀರಿನ ಸರಬರಾಜಿನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು. ಅವಲಂಬಿತ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ನೀರಿನ ಬಳಕೆಯ ಕುರಿತ ಅರಿವಿನ ಕೊರತೆಯಿಂದ ಹಳ್ಳಿಗಳಲ್ಲಿ ನೀರಿನ ಸಮಸ್ಯೆಗಳು ಉಂಟಾಗುತ್ತಿವೆ ಎಂದರು.