ಮೈಸೂರು: ಸಾಮಾಜಿಕ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿ ಕವಿಗಳಿಗೆ ಅತ್ಯಂತ ಮುಖ್ಯವಾಗಿದ್ದು, ಉಗ್ರರ ಬಾಂಬ್ ಸ್ಫೋಟಗಳ ವಿರುದ್ಧ ಸಾಹಿತ್ಯ-ಕಾವ್ಯದ ಸ್ಫೋಟ ವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣ ಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು.
ಮೈಸೂರಿನ ಇನ್ಸ್‍ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಭಾರತ ಕನ್ನಡ ಪರಿಷತ್ತು ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ರಾಜ್ಯಮಟ್ಟದ ಯುಗಾದಿ ಕವಿ-ಕಾವ್ಯ ಮೇಳ, ಸರಳ ವ್ಯಾಕರಣ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಹಲವೆಡೆ ಉಗ್ರರು ಬಾಂಬ್‍ಗಳನ್ನು ಸ್ಫೋಟಿಸುವ ಹೀನ ಕೃತ್ಯದಲ್ಲಿ ತೊಡಗಿದ್ದಾರೆ. ಮೊನ್ನೆಯಷ್ಟೇ ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಬಲಿ ಪಡೆದಿದ್ದಾರೆ. ಒಂದರ್ಥ ದಲ್ಲಿ ಸಾಹಿತ್ಯ-ಕಾವ್ಯವೂ ಒಂದು ಸ್ಫೋಟಕವಾಗಿದ್ದು, ಈ ಉಗ್ರವಾದದ ವಿರುದ್ಧ ಕಾವ್ಯದ ಸಿಡಿಮದ್ದುಗಳು ಸಿಡಿಯ ಬೇಕು. ಇಂತಹ ಬೌದ್ಧಿಕ ಸ್ಫೋಟದಲ್ಲಿ ಮಹಿಳಾ ಸಮುದಾಯ ಮಹ ತ್ವದ ಪಾತ್ರ ವಹಿಸಬೇಕು. ಆ ಮೂಲಕ ಸಮಾಜವನ್ನು ಜಾಗೃತ ಗೊಳಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚೀನ ಕಾವ್ಯ ಮೀಮಾಂಸೆಯಲ್ಲೂ ಕೆಡುಕನ್ನು ನಾಶ ಮಾಡಬೇಕಾದ ಕೆಲಸವನ್ನು ಕಾವ್ಯ ಮಾಡಬೇಕೆಂದು ಪ್ರತಿಪಾದಿಸಲಾಗಿದೆ. ಶತಮಾನಗಳಿಂದ ಸಾಮಾಜಿಕ ಅನಿಷ್ಟ ಪದ್ಧತಿಗಳು ಹಾಗೂ ಮೌಢ್ಯಗಳು ನಮ್ಮಲ್ಲಿ ಬೇರೂರಿದ್ದು, ಇವುಗಳ ವಿರುದ್ಧವೂ ಕಾವ್ಯದ ಸ್ಫೋಟ ಆಗಬೇಕು. ಆ ಮೂಲಕ ವಿಜ್ಞಾನದ ದೀವಿಗೆ ಹಿಡಿದು ಸಮಾಜ ಮುಂದೆ ಸಾಗಬೇಕು. ಈ ನಿಟ್ಟಿನಲ್ಲಿ ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಕೃತಿ ಶಾಲೆಗಳಲ್ಲಿ ಪಠ್ಯಪುಸ್ತಕವಾಗುವ ಅಗತ್ಯವಿದೆ ಎಂದು ಹೇಳಿದರು.
ಇಂದಿನದ್ದು ಮಹಿಳಾ ಯುಗವೇ ಆಗಿದ್ದು, ಮಹಿಳಾ ಸಮು ದಾಯ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಮಹಿಳೆ ಅಬಲೆ ಅಲ್ಲ. ಬದಲಾಗಿ ಆಕೆ ಚೈತನ್ಯ ಪೂರ್ಣೆ. ಪುರುಷನನ್ನು ಆಕರ್ಷಿಸಿ ಸೆಳೆದಿಡುವ ಬಲೆಯೂ ಅಲ್ಲ. ಪುರುಷನ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬಲ್ಲ ಸಾಮಥ್ರ್ಯ ಈ ಯುಗದ ಮಹಿಳೆಗಿದೆ ಎಂದು ನುಡಿದರು.
ಇದೇ ವೇಳೆ ಮುತ್ತುಸ್ವಾಮಿ ಅವರ `ಸರಳ ವ್ಯಾಕರಣ’ ಪುಸ್ತಕ ವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಬಿಡುಗಡೆ ಮಾಡಿದರು. ಅಲ್ಲದೆ, ಹಿರಿಯ ಕಾದಂಬರಿಕಾರರಾದ ಮಂಗಳಾಸತ್ಯನ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಕವಿಕಾವ್ಯ ಮೇಳದಲ್ಲಿ ಹಲವು ಕವಿಗಳು ಕಾವ್ಯಗಳನ್ನು ವಾಚಿಸಿದರು. ಪರಿಷತ್ತಿನ ರಾಜ್ಯಾಧ್ಯಕ್ಷ ರಾಘವೇಂದ್ರಕುಮಾರ್, ಉಪಾಧ್ಯಕ್ಷೆ ಎಸ್.ನಾಗರತ್ನ, ಕೃತಿ ಕರ್ತೃ ಮುತ್ತುಸ್ವಾಮಿ ಮತ್ತಿತರರು ಹಾಜರಿದ್ದರು.