ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ವನಿತೆಯರಿಗೆ ಶುಭ ಕೋರಿದ ಚಿಣ್ಣರು
ಮೈಸೂರು

ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ವನಿತೆಯರಿಗೆ ಶುಭ ಕೋರಿದ ಚಿಣ್ಣರು

April 29, 2019

ಮೈಸೂರು: ಹಿಮಾ ಲಯಕ್ಕೆ ಚಾರಣ ಕೈಗೊಂಡಿರುವ ಬುಡ ಕಟ್ಟು ಸಮುದಾಯದ 12 ಬಾಲಕಿಯರೂ ಸೇರಿದಂತೆ 26 ಸದಸ್ಯರ ತಂಡಕ್ಕೆ ಮೈಸೂರು ರಂಗಾಯಣದ ಚಿಣ್ಣರ ಮೇಳದ ಚಿಣ್ಣರು ಶುಭಾಶಯ ಕೋರಿದರು.

ರಂಗಾಯಣ ವನರಂಗದಲ್ಲಿ ಭಾನುವಾರ ನಡೆದ ಚಿಣ್ಣರ ಮೇಳ ಕಾರ್ಯಕ್ರಮದಲ್ಲಿ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ತಂಡದ ಸದಸ್ಯರು ಪಾಲ್ಗೊಂಡು, ಚಿಣ್ಣರ ಮೇಳದ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದರು. ಈ ವೇಳೆ ಮೇಳದಲ್ಲಿರುವ 450 ಮಕ್ಕಳು ಚಾರಣಿಗರಿಗೆ ಶುಭ ಕೋರಿದರು.
ರಂಗಾಯಣ ನಿರ್ದೇಶಕಿ ಭಾಗೀರಥಿ ಭಾಯಿ ಕದಂ ಎಲ್ಲರಿಗೂ ಗುಲಾಬಿ ನೀಡಿ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ಹಿಮಾಲಯ ಪರ್ವತ ಏರಬೇಕೆ ನ್ನುವ ಕನಸನ್ನು ಹಲವರು ಕಾಣುತ್ತಾರೆ. ಆದರೆ ಅದು ಸುಲಭವಲ್ಲ. ಈ ಹಿಂದೆ ಚಲನಚಿತ್ರವೊಂದರ ಚಿತ್ರೀಕರಣಕ್ಕೆ ತೆರಳಿ ದ್ದಾಗ ಹಿಮಪಾತವಾಗಿತ್ತು. ಇದರಿಂದ ಆ ಸ್ಥಳದಿಂದ ನಮ್ಮನ್ನು ವಾಪಸ್ ಕಳಿಸಿ ಬಿಟ್ಟಿದ್ದರು. ಆದರೆ ಟೈಗರ್ ಅಡ್ವೆಂಚರ್ ಫೌಂಡೇಷನ್ ಸಂಸ್ಥೆ ವಿಶ್ವ ಪರ್ವತಾ ರೋಹಣ ದಿನದ ಅಂಗವಾಗಿ ಕಳೆದ ಸಾಲಿನಲ್ಲಿ ನಾರಿಶಕ್ತಿ ಹೆಸರಿನಲ್ಲಿ ಮಹಿಳೆ ಯರ ತಂಡವನ್ನು ಹಿಮಾಲಯಕ್ಕೆ ಕರೆದು ಕೊಂಡು ಹೋಗಿತ್ತು. ಈ ಬಾರಿ `ಆಶಾ-2019′ ಕಾರ್ಯಕ್ರಮದಡಿ ಬಂಡೀಪುರ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿನ ಬುಡಕಟ್ಟು ಸಮುದಾಯ ಬಾಲಕಿಯರನ್ನು ಹಿಮಾಲಯ ಚಾರಣಕ್ಕೆ ಕರೆದೊಯ್ಯುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿಯ ಲ್ಲಿರುವ ವಿವೇಕ ಬುಡಕಟ್ಟು ಕಲಿಕಾ ಕೇಂದ್ರ ವಸತಿ ಶಾಲೆಯಲ್ಲಿ ಓದುತ್ತಿರುವ 12 ವಿದ್ಯಾರ್ಥಿನಿಯರನ್ನು ಕರೆದೊಯ್ಯುತ್ತಿ ರುವುದು ಶ್ಲಾಘನೀಯ ಎಂದರು.

ಪುರಾತತ್ವ ಮತ್ತು ವಸ್ತು ಸಂಗ್ರಹಾ ಲಯದ ಉಪ ನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ, ಈ ಸಾಲಿನಲ್ಲಿ ಚಾರಣ ಕೈಗೊಂಡಿರುವ ತಂಡ ಮೇ 2ರಂದು ಪ್ರಯಾಣ ಬೆಳಸಲಿದೆ. ಮೇ.5ರಿಂದ 15ವರೆಗೆ ಹಿಮಾಲಯದ ಧೌಲಾರ್ಧ ರೇಂಜ್‍ನ ಹಿಮಾಚಲ ಪ್ರದೇಶದಲ್ಲಿರುವ 14,000 ಅಡಿ ಎತ್ತರದ ಸೌರ್ಕುಂಡಿ ಪಾಸ್ ಚಾರಣ ಮಾಡಲಿದ್ದಾರೆ. ಮೇ.17ರಂದು ಮೈಸೂರಿಗೆ ವಾಪಸ್ಸಾಗಲಿದ್ದಾರೆ. ಈ ಚಾರಣಕ್ಕೆ 8ರಿಂದ 9 ಲಕ್ಷ ರೂ. ವೆಚ್ಚವಾಗಲಿದ್ದು, ಬುಡಕಟ್ಟು ಸಮುದಾ ಯದ ಬಾಲಕಿಯರಿಂದ ಯಾವುದೇ ಶುಲ್ಕ ಪಡೆಯದೆ 130 ದಾನಿಗಳಿಂದ ವಿವಿಧ ರೂಪದಲ್ಲಿ ಚಂದಾ ಸಂಗ್ರಹಿಸಿ ಚಾರಣಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾರಣಿಗರಿಗೆ ಸಮ ವಸ್ತ್ರ ಕೊಡುಗೆ ನೀಡಿದ ರಾಜೇಶ್ವರಿ ವಸ್ತ್ರಾಂ ಲಕಾರ ಸಂಸ್ಥೆಯ ಬಿ.ಎಂ.ರಾಮಚಂದ್ರ, ರಂಗಕರ್ಮಿ ನಾಗರಾಜ್, ತಂಡ ಮುನ್ನಡೆಸ ಲಿರುವ ರಿಯಾ ಸೋಲಂಕಿ, ಟೈಗರ್ ಅಡ್ವೆಂಚರ್ ಫೌಂಡೇಷನ್ ಅಧ್ಯಕ್ಷ ಡಿ.ಎಸ್.ಡಿ. ಸೋಲಂಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »