ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ
ಮೈಸೂರು

ಬರ ಬರುತ್ತಾ ಔಷಧಿಗಳೇ ಆಹಾರವಾಗಿವೆ

May 9, 2019

ಮೈಸೂರು: ಇಂದು ಔಷಧಿಗಳ ಬಳಕೆ ಹೆಚ್ಚಾಗಿದ್ದು, ಔಷಧಿ ಗಳೇ ಆಹಾರವಾಗಿ ಬದಲಾಗಿವೆ ಎಂದು ಆರೋಗ್ಯ ನಿರ್ವಹಣೆ ತಜ್ಞ ಡಾ.ಬಿ.ಆರ್.ಪೈ ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮುದ್ರೆಯಿಂದ ನೋವು ನಿರ್ವಹಣೆ’ ಕುರಿತ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವರ್ಷ ದಿಂದ ವರ್ಷಕ್ಕೆ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಮನುಷ್ಯ ಔಷಧಿಯ ದಾಸನಾಗುತ್ತಿದ್ದಾನೆ ಎಂದರು.

ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ವುಳ್ಳ ಆಹಾರವನ್ನು ಸೇವಸುವುದರ ಜತೆಗೆ ದೈಹಿಕ ವ್ಯಾಯಾಮಗಳನ್ನು ಮಾಡುವ ಬದಲು ತಕ್ಷಣವೇ ಪರಿಹಾರಬೇಕೆನ್ನುವ ಹಂಬಲದಿಂದ ಮಾತ್ರೆಗಳ ಹಿಂದೆ ಬಿದ್ದಿ ದ್ದಾರೆ ಎಂದು ಹೇಳಿದರು.

ಮುದ್ರೆ ಪ್ರತಿಪಾದಕ ಪ್ರೊ.ಡಿ.ವಿ.ಎಸ್. ಅಯ್ಯರ್ ಮಾತನಾಡಿ, ಯಾವುದೇ ಖರ್ಚಿಲ್ಲದೆ. ಎಲ್ಲಿ ಬೇಕಾದರು ಮುದ್ರೆ ಗಳನ್ನು ಮಾಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ದೇಹದ ಕೆಲವು ಭಾಗಗಳಲ್ಲಿ ಕಾಣಿಸುವ ನೋವನ್ನು ಯಾವುದೇ ಚಿಕಿತ್ಸೆ ಪಡೆಯದೆ ಮುದ್ರೆಗಳ ಮೂಲಕ ನಿವಾರಿಸಿಕೊಳ್ಳ ಬಹುದು ಎಂದು ತಿಳಿಸಿದರು.

ಪ್ರತಿನಿತ್ಯ ಆರೋಗ್ಯಭರಿತ ಜೀವನವನ್ನು ಸಾಗಿಸಬೇಕಾದರೆ ತಪ್ಪದೆ ಬೆಳಿಗ್ಗೆ ಮತ್ತು ಸಂಜೆ ಐದರಿಂದ ಹತ್ತು ನಿಮಿಷ ಜ್ಞಾನ ಮುದ್ರೆ, ಪೃಥ್ವಿ ಮುದ್ರೆ, ವಾಯು ಮುದ್ರೆ, ಅಪಾನ ಮುದ್ರೆ ಹಾಗೂ ಪ್ರಾಣ ಮುದ್ರೆ ಗಳನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್, ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್‍ಕುಮಾರ್ ಉಪಸ್ಥಿತರಿದ್ದರು.

Translate »