ಮೈಸೂರು: ಮೈಸೂರಿನ ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಆರ್‍ಪಿ) ಅಶ್ವಾರೋಹಿ ದಳದ ಆವರಣಕ್ಕೆ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಅಧಿಕಾರಿ ಭುಜಂಗರಾವ್ ಹಾಗೂ ಅಂಚೆ ವಿತರಕ ಬಸಪ್ಪ ಪ್ರತಿಮೆಗಳ ಪ್ರತಿಷ್ಠಾಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಸುರಕ್ಷಿತ-ಸಾಂಪ್ರದಾಯಿಕ ವಿಧಾನದ ಮೂಲಕ ಎರಡೂ ಪ್ರತಿಮೆಗಳನ್ನು ಹೊಸ ಮಂಟಪಗಳಿಗೆ ಸ್ಥಳಾಂತರಗೊಳಿಸಲಾಗಿತ್ತು. ಇದೀಗ ಅವುಗಳನ್ನು ಕ್ರಮಬದ್ಧವಾಗಿ ನಿಲ್ಲಿಸುವ ಕಾರ್ಯ ಪೂರ್ಣಗೊಂಡು ನೋಡುಗರಲ್ಲಿ ಹೊಸ ಅನುಭವ ಉಂಟು ಮಾಡುತ್ತಿವೆ. ಪ್ರತಿಮೆಗಳಿಗೆ ಪೇಪರ್ ಹುಲ್ಲು, ಒಣಹುಲ್ಲು, ಥರ್ಮಾಕೋಲ್ ಹಾಗೂ ಗೋಣಿ ಚೀಲವನ್ನು ಕ್ರಮವಾಗಿ ಒಂದರ ಮೇಲೆ ಒಂದರಂತೆ ಸುತ್ತಿ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಿ, ಮಾನವ ಸಂಪನ್ಮೂಲದ ಮೂಲಕವೇ ಸ್ಥಳಾಂತರ ಮಾಡಲಾಗಿತ್ತು.
ಸುಮಾರು ಒಂದೂವರೆ ಟನ್ ತೂಕವಿದ್ದ ಬಸಪ್ಪರ ಪ್ರತಿಮೆ ಹಾಗೂ ಸುಮಾರು ಎರಡೂವರೆ ಟನ್ ತೂಕವಿದ್ದ ಭುಜಂಗರಾವ್ ಪ್ರತಿಮೆ ಇದೀಗ ಹೊಸ ಮಂಟಪಗಳಲ್ಲಿ ಸುರಕ್ಷಿತವಾಗಿ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಪ್ರತಿಮೆಗಳಿಗೆ ಹೊಸದಾಗಿ ಬಣ್ಣದ ಸ್ಪರ್ಶ ನೀಡಿ ಮಂಟಪಗಳಿಗೆ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸುವ ಕಾಮಗಾರಿ ಬಾಕಿ ಇದೆ.