ಮಹಾ ಮಹನೀಯರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದಕ್ಕೆ ಶಾಸಕ ರಾಮದಾಸ್ ಬೇಸರ
ಮೈಸೂರು

ಮಹಾ ಮಹನೀಯರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದಕ್ಕೆ ಶಾಸಕ ರಾಮದಾಸ್ ಬೇಸರ

May 20, 2019

ಮೈಸೂರು: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹ ನೀಯರನ್ನು ಜಾತಿಗಳಿಗೆ ಸೀಮಿತಗೊಳಿಸ ಲಾಗಿದೆ ಎಂದು ಶಾಸಕ ಎಸ್.ಎ.ರಾಮ ದಾಸ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಶ್ರೀ ಶಂಕರ ಜಯಂತಿ-ತತ್ವ ಜ್ಞಾನಿಗಳ ದಿನಾಚರಣೆ’ ಉದ್ಘಾಟಿಸಿ ಅವರು ಮಾತ ನಾಡಿದರು. ಪ್ರಸ್ತುತ ಇಡೀ ಜಗತ್ತು ನೆಮ್ಮದಿ ಗಾಗಿ ಹುಡುಕಾಟ ನಡೆಸುತ್ತಿದೆ. ಸಾರ್ಥಕ ಹಾಗೂ ನೆಮ್ಮದಿ ಬದುಕಿಗೆ ಅಗತ್ಯವಾದ ವಿಚಾರ ಧಾರೆಯನ್ನು ಶ್ರೀ ಶಂಕರಾಚಾರ್ಯರು ಅಂದೇ ವಿಶ್ವಕ್ಕೆ ನೀಡಿದ್ದಾರೆ. ದುರಂತ ವೆಂದರೆ, ಶಂಕರಾಚಾರ್ಯರು ಸೇರಿದಂತೆ ಎಲ್ಲಾ ಮಹನೀಯರನ್ನು ಅವರು ಜನಿ ಸಿದ ಜಾತಿಗಳಿಗೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸೀಮಿತಗೊಳಿಸಲಾಗಿದೆ ಎಂದು ವಿಷಾದಿಸಿದರು.

ಜೀವನದ ಮೌಲ್ಯಗಳ ಬಗ್ಗೆ ಚಿಂತನೆ ಮಾಡುವುದು, ಅಳವಡಿಸಿಕೊಳ್ಳುವುದೇ ಸಾರ್ಥಕ ಬದುಕು. ಇದನ್ನು ಶಂಕರಾ ಚಾರ್ಯರು ಸಾರಿ ಹೇಳಿದ್ದಾರೆ. ಅವರು ಚಂಡಾಳನನ್ನು ಶಿವನನ್ನಾಗಿ ನೋಡಿದ್ದರು. ಆದರೆ ಇಂದು ಅದನ್ನು ಅನೇಕ ರೀತಿ ಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿರುವುದು ದುರಂತ. ಶಂಕರಾಚಾರ್ಯರ ಚಿಂತನೆ ಗಳು ಸರ್ವಕಾಲಿಕವಾದದ್ದು. ಲಂಡನ್‍ನ ಚರ್ಚ್‍ಗಳಲ್ಲಿ ಶಂಕರಾಚಾರ್ಯರ ವಿಚಾರ ಗಳು ಚರ್ಚೆಯಾಗುತ್ತಿದ್ದು, ಇದರಿಂದಲೇ ಅವರ ಮಹತ್ವ ಅರಿತುಕೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕ ರಿಗೆ ಶ್ರೀ ಶಂಕರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಭಾರತ ಕಾಂಗ್ರೆಸ್ ಸಮಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಪಿ.ಲಕ್ಷ್ಮಣ ಪ್ರಭು, ಮೈಸೂರು ಮಹಾ ನಗರಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್, ಅಂಚೆ ಜೀವ ವಿಮೆ ಕ್ಷೇತ್ರಾಧಿಕಾರಿ ಡಾ.ಪಿ.ಶಾಂತರಾಜೇ ಅರಸ್, ವಿಜ್ಞಾನ ಶಿಕ್ಷಕ ಎನ್.ವಿ.ದಿನೇಶ್, ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕಿ ಡಾ.ಕೆ.ಲೀಲಾ ಪ್ರಕಾಶ್, ಸೆಂಟ್ ಮದರ್ ಥೆರೆಸಾ ವರ್ಚುಯಲ್ ಯುನಿವರ್ಸಿಟಿ ಕುಲಸಚಿವೆ ಡಾ.ಆರ್.ವಿಜಯ ಸರಸ್ವತಿ, ಸಮಾಜ ಸೇವಕ ಮಹಮದ್ ನಾಜೀರ್ ಅವರಿಗೆ ಶ್ರೀ ಶಂಕರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಎಸ್‍ಎಸ್ ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಲವು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬಿಜೆಪಿ ಮುಖಂಡ ಯಶಸ್ವಿ ಸೋಮ ಶೇಖರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಡಿ.ಟಿ.ಪ್ರಕಾಶ್, ಕಾಂಗ್ರೆಸ್ ಮಾಜಿ ನಗರಾಧ್ಯಕ್ಷ ಟಿ.ಎಸ್. ರವಿಶಂಕರ್ ಮತ್ತಿತರರು ಹಾಜರಿದ್ದರು.

Translate »