ಮೈಸೂರು:ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಶನಿವಾರ ಸಂಜೆ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ದಿನಸಿ ವ್ಯಾಪಾರಿ ನಾಗರಾಜು ಮತ್ತು ಜ್ಯೋತಿ ದಂಪತಿ ಪುತ್ರ ಹೇಮಂತ್ (16) ಮೃತಪಟ್ಟ ದುರ್ದೈವಿ. ಬೇಲೂ ರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದ್ದ ಈತ, ಶಾಲಾ ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವೇಳೆಯಲ್ಲಿ ನೀರಿನಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಧಾವಿಸಿದ ಕೆಆರ್‍ಎಸ್ ಠಾಣೆ ಪೊಲೀಸರು ದೇಹವನ್ನು ಮೇಲೆತ್ತಿಸಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾ ಗಾರಕ್ಕೆ ಸಾಗಿಸಿದರು. ಭಾನುವಾರ ಶವಾಗಾರದ ಬಳಿ ಧಾವಿಸಿ ಬಂದ ಮೃತ ಬಾಲ ಕನ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತಲ್ಲದೆ, ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಕರ ಬೇಜವಾಬ್ದಾರಿಯೇ ಈ ದುರ್ಘಟನೆಗೆ ಕಾರಣ ಎಂದು ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆರೋಪಿಸಿದರು.
ಇದೇ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೃತ ಬಾಲಕ ಹೇಮಂತ್‍ನ ಚಿಕ್ಕಪ್ಪ ನಂದಕುಮಾರ್, ಪ್ರವಾಸಕ್ಕೆ ಕರೆದೊಯ್ದಿದ್ದ ಶಿಕ್ಷಕರಾಗಲೀ, ಶಾಲೆಯ ಮುಖ್ಯ ಶಿಕ್ಷಕರಾಗಲೀ ನಮ್ಮ ಹುಡುಗ ಮೃತಪಟ್ಟ ವಿಷಯವನ್ನು ನಮಗೆ ತಿಳಿಸಲೇ ಇಲ್ಲ. ಶನಿವಾರ ಸಂಜೆ 7.30ಕ್ಕೆ ಯೋಗಕ್ಷೆಮ ವಿಚಾರಿಸುವ ಸಲುವಾಗಿ ನಾವೇ ದೂರವಾಣಿ ಕರೆ ಮಾಡಿದಾಗ, ನಿಮ್ಮ ಹುಡುಗ ಭೂಮಿ ಮೇಲೆ ಇಲ್ಲ ಎಂದು ಹೇಳಿದರು. ಘಟನೆ ನಡೆದ ಕೂಡಲೇ ವಿಷಯ ಮುಟ್ಟಿಸದ ಹಿನ್ನೆಲೆಯಲ್ಲಿ ಜೊತೆಯಲ್ಲಿದ್ದ ಶಿಕ್ಷಕರ ಮೇಲೆಯೇ ನಮಗೆ ಅನುಮಾನ ಇದೆ. ಘಟನೆ ಹೇಗಾಯಿತು ಎಂಬ ಬಗ್ಗೆ ಶಿಕ್ಷಕರು ನಮಗೆ ಸ್ಪಷ್ಟಪಡಿಸಬೇಕು. ಮುಂದೆ ಈ ರೀತಿ ಘಟನೆ ಮರುಕಳಿಸಬಾರದು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಕ್ರಿಯಿಸಿದರು.
ಶಾಲೆ ವಿರುದ್ಧ ದೂರು: ಘಟನೆ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆ ಮನವಿ ತಿರಸ್ಕರಿಸಿದ ಮೃತ ಬಾಲಕನ ಪೋಷಕರು, ತಮ್ಮ ಪುತ್ರನ ಸಾವಿಗೆ ಶಿಕ್ಷಕರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ, ಶಾಲಾ ಮುಖ್ಯ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಕೆಆರ್‍ಎಸ್ ಪೊಲೀಸರು ಒಪ್ಪಿಸಿದ್ದಾರೆ.