ಮೈಸೂರು: ಉತ್ತಮ ಆರೋಗ್ಯಕ್ಕೆ ಪೂರಕವಾದ, ನೈಸರ್ಗಿಕ ಪದ್ಧತಿಯಲ್ಲಿಯೇ ಮಾಗಿಸಿದ ಮಾವಿನ ಹಣ್ಣನ್ನು ಕಡಿಮೆ ಬೆಲೆಯಲ್ಲಿ ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸಲು ಮೈಸೂ ರಿನ ಕರ್ಜನ್ ಪಾರ್ಕ್‍ನಲ್ಲಿ ಮೇ 24ರಿಂದ ಐದು ದಿನಗಳ ಮಾವು ಮತ್ತು ಹಲಸು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂಜಯ್ ತಿಳಿಸಿದ್ದಾರೆ.
ಕರ್ಜನ್ ಪಾರ್ಕ್‍ನಲ್ಲಿರುವ ತೋಟ ಗಾರಿಕಾ ಇಲಾಖೆ ಹಿರಿಯ ಉಪ ನಿರ್ದೇ ಶಕರ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಮಾವು ಬೆಳೆಗಾರರಿಂದ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸಲು ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ. 40 ಮಳಿಗೆಗಳಲ್ಲಿ ಮಾವು, ಎರಡು ಮಳಿಗೆ ಯಲ್ಲಿ ಹಲಸಿನ ಹಣ್ಣನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ರೈತರಿಗೆ ಆದ್ಯತೆ ನೀಡಲಾಗಿದ್ದು, ಮೈಸೂರು ಜಿಲ್ಲೆಯ ಮಾವು ಬೆಳೆಗಾರರು 18 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗ ಳಿಂದಲೂ ಮಾವು ಬೆಳೆಗಾರರು ವಿವಿಧ ತಳಿಯ ಮಾವಿನ ಹಣ್ಣನ್ನು ಮಾರಾಟ ಮಾಡಲಿದ್ದಾರೆ. ಮೇ 24ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮೇಳ ಉದ್ಘಾಟಿಸಲಿದ್ದಾರೆ ಎಂದರು.
ಕಟ್ಟುನಿಟ್ಟಿನ ತಪಾಸಣೆ: ಮೇಳದಲ್ಲಿ ರತ್ನ ಗಿರಿ, ಅಲ್ಫಾನ್ಸೋ, ಬಾದಾಮಿ, ಬಂಗನ ಪಲ್ಲಿ, ರಸಪುರಿ, ಮಲಗೋವಾ, ತೋತಾ ಪುರಿ, ಮಲ್ಲಿಕಾ, ಸೆಂದೂರ, ನೀಲಂ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಹಾಗೂ ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿ 65 ಮೆಟ್ರಿಕ್ ಟನ್ ಮಾವು ಮಾರಾಟವಾಗಿತ್ತು. ಈ ಬಾರಿ 100 ಮೆಟ್ರಿಕ್ ಟನ್ ಮಾವಿನ ಹಣ್ಣು ಮಾರಾಟವಾಗುವ ನಿರೀಕ್ಷೆಯಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ಎಲ್ಲಾ ಮಳಿಗೆಗಳಲ್ಲೂ ದಿನಕ್ಕೆ ಮೂರು ಬಾರಿ ತಪಾಸಣೆ ನಡೆಸಲಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿರುವ ಹಣ್ಣು ಗಳ ಮಾರಾಟ ನಿಷೇಧಿಸಲಾಗಿದೆ.
ಈಗಾಗಲೇ ವ್ಯಾಪಾರಿ ಗಳಿಗೆ ಸೂಚನೆ ನೀಡಿದ್ದೇವೆ. ಆದರೂ ಕಣ್ತಪ್ಪಿಸಿ ರಾಸಾ ಯನಿಕ ಬಳಸಿ ಮಾಗಿಸಿರುವ ಹಣ್ಣನ್ನು ಮಾರಾಟ ಮಾಡಬಹುದೆಂಬ ಅನು ಮಾನದ ಮೇರೆಗೆ ಮಳಿಗೆಯಲ್ಲಿರುವ ಎಲ್ಲಾ ಹಣ್ಣುಗಳನ್ನು ಪರೀಕ್ಷಿಸಲಾಗುತ್ತದೆ. ರಾಸಾಯನಿಕ ಬಳಸಿರುವ ಹಣ್ಣುಗಳು ಹೆಚ್ಚು ಆಕರ್ಷಕವಾಗಿ, ಗಾಢ ಬಣ್ಣದಿಂದ ಕೂಡಿರುತ್ತವೆ. ಮೇಲ್ನೋಟಕ್ಕೆ ಅವುಗಳನ್ನು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸುವು ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಾರುಕಟ್ಟೆಗಿಂತ ಕಡಿಮೆ ಬೆಲೆ: ಮೇಳ ದಲ್ಲಿ ಮಾರುಕಟ್ಟೆಗಿಂತ ಎರಡು ರೂ. ಕಡಿಮೆ ದರದಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುವುದು. ಹಾಪ್ ಕಾಮ್ಸ್, ಎಪಿಎಂಸಿ ಪ್ರತಿನಿಧಿಗಳಿರುವ ಬೆಲೆ ನಿಗದಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಪ್ರತಿದಿನ ಮಾವಿನ ಹಣ್ಣಿನ ಬೆಲೆ ನಿಗದಿ ಮಾಡುತ್ತದೆ. ಮಳಿಗೆ ಮುಂದೆ ಹಣ್ಣುಗಳ ಬೆಲೆ ಫಲಕ ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರೈತರಿಗೆ ಜಾಗೃತಿ: ಮಾವು ಮೇಳದಲ್ಲಿ ರೈತರಿಗೆ ಲಾಭದಾಯಕ ಕೃಷಿ, ಇಳುವರಿ ಹೆಚ್ಚು ಪಡೆಯುವ ವಿಧಾನ, ಸಸಿ ಮಡಿ ಯಲ್ಲಿ ಅನುಸರಿಸಬೇಕಾದ ವಿಧಾನ, ಮಾವುಗಳ ತಳಿ, ಮಾಗಿಸುವಿಕೆ ಸೇರಿ ದಂತೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ಮಾವುಗಳ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಡ ಲಾಗುತ್ತದೆ ಎಂದು ವಿವರಿಸಿದರು.
ಪರಿಸರ ಸ್ನೇಹಿ: ಮೇಳದಲ್ಲಿ ಪ್ಲಾಸ್ಟಿಕ್ ನಿಷೇ ಧಿಸಲಾಗಿದೆ. ಗ್ರಾಹಕರು ಬಟ್ಟೆ ಬ್ಯಾಗ್ ತರ ಬೇಕು. ಮೇಳದಲ್ಲಿ ಪೇಪರ್ ಕಾರ್ಟನ್ ಬಾಕ್ಸ್ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಸ್ಯಸಂತೆ: ಹಿರಿಯ ಸಹಾಯಕ ತೋಟ ಗಾರಿಕಾ ನಿರ್ದೇಶಕಿ ಹಬೀಬಾ ನಿಶಾದ್ ಮಾತ ನಾಡಿ, ಮೇಳದಲ್ಲಿ ಸಸ್ಯ ಸಂತೆ ಏರ್ಪಡಿಸಲಾಗಿದೆ. ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿ ರುವ ವಿವಿಧ ಹಣ್ಣು ಹಾಗೂ ಅಲಂಕಾರಿಕಾ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ತೆಂಗಿನಗಿಡ, ಮಾವು, ಹಲಸು, ಸೀಬೆ, ನೇರಳೆ, ಜಂಬು ನೇರಳೆ, ನುಗ್ಗೆ ಸೇರಿದಂತೆ ವಿವಿಧ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ನಾಟಿ ತೆಂಗಿನ ಗಿಡಕ್ಕೆ 60 ರೂ, ಹೈಬ್ರೀಡ್ ತೆಂಗಿನ ಗಿಡಕ್ಕೆ 170 ರೂ. ವರೆಗೂ ದರ ನಿಗದಿ ಮಾಡ ಲಾಗಿದೆ. ಹಣ್ಣುಗಳ ಗಿಡಗಳು 35 ರೂ.ನಿಂದ ಆರಂಭವಾಗುತ್ತವೆ ಎಂದು ತಿಳಿಸಿದರು.