ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಜೋರು ಮಳೆ
ಹಾಸನ

ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಜೋರು ಮಳೆ

May 26, 2019

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಗುಡುಗು-ಸಿಡಿಲು ಸಹಿತ ಜೋರು ಮಳೆಯಿಂದ ಭಾರಿ ನಷ್ಟ ಸಂಭವಿಸಿದ್ದು, ವಿವಿಧೆಡೆ ಮನೆ- ಕಟ್ಟಡಗಳ ಛಾವಣಿ ಹಾರಿ ಹೋಗಿದೆ. ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ವಾಹನಗಳು ಜಖಂಗೊಂಡಿರುವುದು, ವಿದ್ಯುತ್ ವ್ಯತ್ಯಯ ಸಂಭವಿಸಿರುವುದು, ವಾಹನ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ವರದಿಯಾಗಿದೆ.

ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಆರಂಭವಾದ ಮಳೆ 11 ಗಂಟೆವರೆಗೆ ಬಿಡುವು ನೀಡದೆ ಸುರಿಯಿತು. ಜೋರು ಮಳೆ, ಗಾಳಿ, ಗುಡುಗು, ಮಿಂಚು ಭಯದ ವಾತಾವರಣ ನಿರ್ಮಿಸಿತ್ತು. ಗ್ರಾಮಾಂತರ ಭಾಗದಲ್ಲಿ ಈ ವರ್ಷ ಇಷ್ಟೊಂದು ಜೋರು ಮಳೆಯಾಗಿರಲಿಲ್ಲ.

ಅಗಿಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ ನಿರ್ಮಿಸಿರುವ ನೂತನ ಕಟ್ಟಡದ ಛಾವಣಿ ಹಾರಿಹೋಗಿದೆ. ತಡೆ ಗೋಡೆ ಕುಸಿದು ಬಿದ್ದಿದ್ದು ಆಸ್ಪತ್ರೆ ಕೊಠಡಿಗಳೆಲ್ಲ ಜಲಾವೃತವಾಗಿದ್ದು, ಕಂಪ್ಯೂಟರ್, ದಾಖಲೆ ಪತ್ರಗಳು ನೀರಿ ನಲ್ಲಿ ತೇಲಾಡುತ್ತಿದ್ದವು.

10 ಲಕ್ಷ ರೂ.ವೆಚ್ಚದಲ್ಲಿ ಈಗಷ್ಟೇ ನಿಮಾರ್ಣವಾಗಿದ್ದ ಆರೋಗ್ಯ ಕೇಂದ್ರ ಕಟ್ಟಡ ಇದಾಗಿದೆ. ಗ್ರಾಮದ ಮನೆಗಳಿಗೂ ಮಳೆಯ ಬಿಸಿ ತಟ್ಟಿದ್ದು ಬಹುತೇಕ ಹೆಂಚುಗಳು ಹಾಳಾಗಿವೆ. ರಸ್ತೆಯಲ್ಲಿ ಮರ ಗಿಡಗಳು ಧರೆಗುರುಳಿ ಅಪಾರ ನಷ್ಟವುಂಟು ಮಾಡಿದೆ.

ನಗರದಲ್ಲೂ ಭಾರಿ ಮಳೆ: ಹಾಸನ ನಗರ ಹಾಗೂ ಸುತ್ತಲ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯಿತು. ಮಳೆರಾಯನ ಆರ್ಭಟ ಒಂದು ಗಂಟೆಯಿತ್ತಾದರೂ ಭಯಂಕರವಾಗಿತ್ತು. ಇಳಿಜಾರು ಪ್ರದೇಶ ದಲ್ಲಿರುವ ಅಮಿರ್ ಮೊಹಲ್ಲಾ, ರಂಗೋಲಿ ಹಳ್ಳ ಬಡಾವಣೆಗಳಲ್ಲಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಬೇಕಾಯಿತು. ಜೋರು ಮಳೆ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ ಕತ್ತಲಲ್ಲೇ ಇರ ಬೇಕಾಯಿತು. ಹನುಮಂತಪುರ, ಬೂವನ ಹಳ್ಳಿ, ಕೆಂಚಟ್ಟಹಳ್ಳಿ, ಗವೇನಹಳ್ಳಿ, ನಿಟ್ಟೂರು ಭಾಗದಲ್ಲೂ ಜೋರು ಮಳೆ ಸುರಿಯಿತು.

ವಾಹನ ಜಖಂ: ತಾಲೂಕಿನ ನಾರಿಹಳ್ಳಿ ಯಲ್ಲಿ ಜೋರು ಗಾಳಿಗೆ ಛಾವಣಿ ಕುಸಿದು ಮಾರುತಿ ವ್ಯಾನ್ ಜಖಂಗೊಂಡಿದೆ. ಕೃಷ್ಣೇ ಗೌಡ ಎಂಬವರಿಗೆ ಸೇರಿದ ವ್ಯಾನ್‍ನ ಮುಂಭಾಗ ಪೂರ್ತಿ ಹಾನಿಗೀಡಾಗಿದೆ. ಎರಡು ಹಸುಗಳಿಗೂ ಪೆಟ್ಟಾಗಿದ್ದು ತಕ್ಷಣವೇ ಅವುಗಳನ್ನು ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

Translate »