ರೈಲಿಗೆ ಸಿಲುಕಿ ಮೊಟ್ಟೆ ವ್ಯಾಪಾರಿ ಮಹಿಳೆ ಸಾವು
ಮೈಸೂರು

ರೈಲಿಗೆ ಸಿಲುಕಿ ಮೊಟ್ಟೆ ವ್ಯಾಪಾರಿ ಮಹಿಳೆ ಸಾವು

May 30, 2019

ಮೈಸೂರು: ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ನಾಟಿಕೋಳಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಮೈಸೂರಿನ ಜೆ.ಪಿ.ನಗರದ ಬಳಿ ನಡೆದಿದೆ. ಮೈಸೂರು ತಾಲೂಕು ಹೊಸಹುಂಡಿ (ಕೆಂಪೇಗೌಡನಹುಂಡಿ) ಗ್ರಾಮದ ನಿವಾಸಿ ಲೇಟ್ ಸಿದ್ದೇಗೌಡರ ಪತ್ನಿ ಸಣ್ಣಮ್ಮ(65) ಎಂಬುವರೆ ರೈಲಿಗೆ ಸಿಲುಕಿ ಮೃತಪಟ್ಟವರು. ಸಣ್ಣಮ್ಮ ಪ್ರತಿದಿನ ನಾಟಿಕೋಳಿ ಮೊಟ್ಟೆಯನ್ನು ಮೈಸೂರಿನ ಜೆ.ಪಿ. ನಗರ, ಶ್ರೀರಾಮಪುರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಮಾರಾಟ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಹೊಸಹುಂಡಿಯಿಂದ ಮೈಸೂರಿಗೆ ಮೊಟ್ಟೆ ಮಾರಲು ಆಗಮಿಸಿದ್ದರು. ಜೆ.ಪಿ.ನಗರದ ವಿವಿಧ ರಸ್ತೆಗಳಲ್ಲಿ ಸುತ್ತಾಡಿ ಮೊಟ್ಟೆ ಮಾರಾಟ ಮಾಡಿದ್ದರು. ಉಳಿಕೆಯಿದ್ದ ಮೊಟ್ಟೆಯನ್ನು ಮಾರಾಟ ಮಾಡಲು ಬೆಳಿಗ್ಗೆ 10.30ರಲ್ಲಿ ಕಾಲು ದಾರಿ ಮೂಲಕ ಸಾಗಿ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಪಿ.ನಗರದ ಬಳಿ ರೈಲ್ವೆ ಹಳಿ ದಾಟಲು ಹಲವು ಕಾಲು ದಾರಿಗಳಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ರೈಲು ಆಗಮಿಸುತ್ತಿರು ವುದು ಗೋಚರಿಸುತ್ತಿದೆ. ಆತುರ ಆತುರದಲ್ಲಿ ಸಾಗಿದರೆ ರೈಲು ಬರುವುದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಸಣ್ಣಮ್ಮ ಅವರು ರೈಲು ಸಮೀಪದಲ್ಲಿ ಬರುವಾಗಲೇ ಹಳಿ ದಾಟಲು ಮುಂದಾಗಿದ್ದಾರೆ. ತಲೆ ಮೇಲೆ ಮೊಟ್ಟೆಯಿದ್ದ ಬಾಕ್ಸ್ ಇದ್ದ ಹಿನ್ನೆಲೆ ಹಾಗೂ ಹಳಿ ಮೇಲಿನ ಜಲ್ಲಿಕಲ್ಲಿನ ಮೇಲೆ ವೇಗವಾಗಿ ಓಡಲಾಗದೆ ರೈಲಿಗೆ ಸಿಲುಕಿದ್ದಾರೆ. ಹಳಿ ಮೇಲೆ ಮೃತದೇಹ ಬಿದ್ದಿದ್ದನ್ನು ಗಮನಿಸಿದ ದಾರಿ ಹೋಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸಣ್ಣಮ್ಮ ಅವರ ಎಲೆ ಅಡಿಕೆ ಚೀಲದಲ್ಲಿದ್ದ ಚೀಟಿಯಲ್ಲಿ ಬರೆದಿದ್ದ ಮೃತರ ಮಗಳು ಭಾಗ್ಯ ಅವರ ಮೊಬೈಲ್ ಸಂಖ್ಯೆಗೆ ಸ್ಥಳೀಯರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಯಿತು. ಮೃತರ ಅಂತ್ಯಕ್ರಿಯೆ ಸಂಜೆ ನೆರವೇರಿತು. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »