ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ
ಮೈಸೂರು

ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ

June 1, 2019

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಸಿದ್ಧತೆಗಾಗಿ ಜೂನ್ 4ರಂದು ಮೈಸೂರಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಯೋಗ ತರಬೇತಿ ಸಂಸ್ಥೆ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸಭೆಯಲ್ಲಿ ಹಾಜರಿರುವರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ರೇಸ್ ಕ್ಲಬ್ (ಒಖಅ) ಆವರಣದಲ್ಲಿ ಜೂನ್ 21ರಂದು ಸಾಮೂಹಿಕ ಯೋಗ ಪ್ರದರ್ಶನ ನಡೆಸಲುದ್ದೇಶಿಸಿದ್ದು, ಇಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‍ರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಈ ಬಾರಿ 1.25 ಲಕ್ಷ ಮಂದಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡುವ ಉದ್ದೇಶದಿಂದ ಯೋಗ ಸಂಸ್ಥೆಗಳ ಸಹಕಾರದಿಂದ ಜಿಲ್ಲಾಡಳಿತವು ಪ್ರಯತ್ನಿಸುತ್ತಿದ್ದು, ಅಷ್ಟೂ ಮಂದಿಗೆ ರೇಸ್ ಕೋರ್ಸ್ ಆವರಣದಲ್ಲಿ ಸ್ಥಳಾವಕಾಶವಿದೆಯೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರ ಚರ್ಚೆ ನಡೆಸುತ್ತಿದ್ದಾರೆ.

Translate »