ಮಳೆ ಕೊರತೆಯಿಂದ ಕಡಿಮೆ ಇಳುವರಿ; ತರಕಾರಿ ಬಲು ದುಬಾರಿ
ಮೈಸೂರು

ಮಳೆ ಕೊರತೆಯಿಂದ ಕಡಿಮೆ ಇಳುವರಿ; ತರಕಾರಿ ಬಲು ದುಬಾರಿ

June 10, 2019

ಮೈಸೂರು: ತರಕಾರಿ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಮಳೆ ಕೊರತೆಯಿಂದ ತರಕಾರಿ ಇಳುವರಿ ಕಡಿಮೆಯಾಗಿರುವುದು ಹಾಗೂ ಇರುವ ಉತ್ಪನ್ನವೂ ನೆರೆ ರಾಜ್ಯಗಳಿಗೆ ರಫ್ತಾಗುತ್ತಿರುವು ದರಿಂದ ಬೇಡಿಕೆಯೊಂದಿಗೆ ಬೆಲೆಯೂ ಹೆಚ್ಚಾಗುತ್ತಿದೆ. ಒಂದೆರಡು ವಿಧದ ತರಕಾರಿ ಹೊರತು ಬಹುತೇಕ ತರಕಾರಿಗಳ ಬೆಲೆ ಗಗನಮುಖಿ ಯಾಗಿದೆ. ತರಕಾರಿ ಜೊತೆಗೆ ಕೊತ್ತಂಬರಿ ಸೊಪ್ಪಿನ ಬೆಲೆಯೂ ಏರುತ್ತಲೇ ಇದೆ. ನೆರೆ ರಾಜ್ಯ ಕೇರಳ, ತರಕಾರಿಗೆ ಮೈಸೂರನ್ನೇ ಅವಲಂಬಿಸಿದೆ. ನಿತ್ಯ ನೂರಾರು ಲೋಡ್ ತರಕಾರಿ ಕೇರಳಕ್ಕೆ ರಫ್ತಾಗುತ್ತದೆ. ಮತ್ತಷ್ಟು ತರಕಾರಿಯನ್ನು ತಮಿಳುನಾಡಿಗೂ ಸಾಗಿಸಲಾ ಗುತ್ತದೆ. ಇಳುವರಿ ತಗ್ಗಿರುವುದರ ಜೊತೆಗೆ ಹೆಚ್ಚು ರಫ್ತಾಗುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲೂ ಬೆಲೆ ವಿಪರೀತವಾಗಿದೆ. ರಂಜಾನ್ ತಿಂಗಳಲ್ಲಿ ಕೇರಳಕ್ಕೆ ರಫ್ತು ಪ್ರಮಾಣ ತಗ್ಗಿತ್ತು. ಇಂದಿನಿಂದ ಮತ್ತೆ ನೂರಾರು ಲೋಡ್ ತರಕಾರಿ ಕೇರಳಕ್ಕೆ ಹೋಗುತ್ತಿದೆ. ಪರಿಣಾಮ ಮಾರುಕಟ್ಟೆ ಬೆಲೆಯಲ್ಲಿ 10-20ರೂ. ಅಧಿಕವಾಗಿದೆ.

ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಭಾನುವಾರ ಕೆಜಿಗೆ ಊಟಿ ಬೀನ್ಸ್ 140, ಕಾರವಾರ ಬೀನ್ಸ್ 60-80ರೂ., ಕ್ಯಾರೇಟ್ 50ರೂ., ಟೊಮೋಟೋ 40ರೂ., ಮೂಲಂಗಿ 30ರೂ., ದಪ್ಪ ಮೆಣಸಿನಕಾಯಿ(ಕ್ಯಾಪ್ಸಿಕಮ್) 80ರೂ., ಬದನೆ 30ರೂ. ನುಗ್ಗೆಕಾಯಿ 60ರೂ., ಈರುಳ್ಳಿ 20ರೂ., ಮೆಣಸಿನಕಾಯಿ 50-65ರೂ., ಹಸಿ ಬಟಾಣಿ 180ರೂ., ಹೀರೆಕಾಯಿ 35ರೂ.ಗೆ ಮಾರಾಟವಾಗುತ್ತಿದೆ. ಟೊಮೋಟೋ ಹಾಗೂ ಹೀರೆಕಾಯಿ ಬೆಲೆ ಮಾತ್ರ ಕಳೆದ ವಾರಕ್ಕಿಂತ ಸ್ವಲ್ಪ ತಗ್ಗಿದಂತಿದೆ. ಇನ್ನು ಅಡುಗೆಗೆ ಅತ್ಯವಶ್ಯವಾದ ಕೊತ್ತಂಬರಿ ಸಣ್ಣ ಕಟ್ಟಿಗೆ 12ರೂ, ಮೀಡಿಯಂ 25 ಹಾಗೂ ಹಿಡಿಗಾತ್ರದ ಕಟ್ಟಿಗೆ 40ರೂ. ಬೆಲೆಯಿದೆ. ಕೆಲ ವ್ಯಾಪಾರಿಗಳ ಬಳಿ ತರಕಾರಿ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು. ಹೋಲ್‍ಸೇಲ್ ವರ್ತಕರು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಹೆಚ್ಚು ಪ್ರಮಾಣದ ತರಕಾರಿ ಬೇಕಾದವರು ಅವರ ಬಳಿ ಕೊಳ್ಳಬಹುದಾದರೂ ನಿತ್ಯ ಬಳಕೆಗೆ ತಿಣುಕಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆಲ ತಿಂಗಳ ಕಾಲ ಮಳೆ ಕೊರತೆಯಿಂದ ತರಕಾರಿ ಇಳುವರಿ ಕಡಿಮೆಯಾಗಿತ್ತು. ಬೋರ್‍ವೆಲ್‍ಗಳಲ್ಲೂ ನೀರು ಕಡಿಮೆಯಾದ ಕಾರಣ ಹೆಚ್ಚು ಬೆಳೆಯಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಆಲಿಕಲ್ಲು ಮಳೆ ಸುರಿದು ಒಂದಷ್ಟು ಬೆಳೆ ಹಾಳಾಗಿದೆ. ಇದರೊಂದಿಗೆ ತರಕಾರಿಗೆ ಕೇರಳ ರಾಜ್ಯದವರು ಮೈಸೂರನ್ನೇ ಅವಲಂಬಿಸಿರುವುದು ಹಾಗೂ ತಮಿಳುನಾಡಿನಿಂದಲೂ ಬೇಡಿಕೆ ಹೆಚ್ಚಾಗಿರುವುದರಿಂದ ಸ್ಥಳೀಯ ವ್ಯಾಪಾರಿಗಳೂ ಹೆಚ್ಚು ಬೆಲೆಗೆ ಕೊಂಡು ಮಾರಾಟ ಮಾಡು ವಂತಾಗಿದೆ. ಮುಂದಿನ ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದರೂ ಖಚಿತವಾಗಿ ಹೇಳಲಾಗದು ಎನ್ನುವುದು ವ್ಯಾಪಾರಿಯೊಬ್ಬರ ಅಭಿಪ್ರಾಯವಾಗಿದೆ.

Translate »