ಮೈಸೂರು: ಮೈಸೂರು-ಮುಂಬೈ ನಡುವೆ ಐರಾವತ ಡ್ರೀಮ್ ಕ್ಲಾಸ್ ಬಸ್ ಸಂಚಾರಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕೆಎಸ್‍ಆರ್‍ಟಿಸಿ ಚೀಫ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ (ಸಿಎಸ್‍ವಿಓ) ಲಿಂಗರಾಜು ಅವರು ಮೈಸೂರಿನ ಗ್ರಾಮಾಂತರ ಸಾರಿಗೆ 2ನೇ ಘಟಕದ ಆವರಣದಲ್ಲಿ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಪ್ರಯಾಣಿಕರ ಸುಖಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ 14.5 ಮೀಟರ್ ಉದ್ದದ ಈ ಬಸ್‍ನಲ್ಲಿ ಮೇಲ್ಗಡೆ ಮತ್ತು ಕೆಳಗಡೆ ಬರ್ತ್‍ಗಳು ಸೇರಿ ಒಟ್ಟು 40 ವಿಶೇಷ ಆಸನಗಳಿವೆ. ಆಸನದಲ್ಲಿಯೇ ಪ್ರಯಾಣಿಕರ ಲಗ್ಗೇಜ್ ಗಳನ್ನು ಇಟ್ಟುಕೊಳ್ಳಲು ಲಗ್ಗೇಜ್ ಕ್ಯಾರಿಯರ್ ಇದೆ. ಪ್ರತಿ ಬರ್ತ್‍ನಲ್ಲೂ ಎಸಿ ಅಳವಡಿಸಿದ್ದು, ಫೋನ್ ಹೋಲ್ಡರ್, ಚಾರ್ಜಿಂಗ್ ವ್ಯವಸ್ಥೆಯೂ ಇದೆ. ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರಿಗೆ ಬೆಡ್ ಶೀಟ್, ಕುಡಿಯುವ ನೀರಿನ ಬಾಟಲ್ ಒದಗಿಸ ಲಾಗುತ್ತದೆ. ಟಿಕೆಟ್ ದರ ಒಂದು ಟ್ರಿಪ್‍ಗೆ ರೂ.2000 ನಿಗದಿಪಡಿಸಲಾಗಿದೆ. ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ಮತ್ತು ಮುಂಬೈಯಿಂದ ಏಕಕಾಲಕ್ಕೆ ಬಸ್‍ಗಳು ಹೊರಡಲಿವೆ. ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ಬಸ್‍ಗಳು ಮೈಸೂರು ಮತ್ತು ಮುಂಬೈ ತಲುಪಲಿವೆ. ಬಸ್‍ನ ಹಿಂಬದಿ ಅಳವಡಿಸಿರುವ ಹೆಚ್ಚು ಸಾಮಥ್ರ್ಯದ ಕ್ಯಾಮರಾ ಮೂಲಕ ಚಾಲಕನ ಎದುರಿನಲ್ಲಿ ಇರುವ ಚಿಕ್ಕ ಎಲ್‍ಇಡಿ ಪರದೆಯಲ್ಲಿ ಬಸ್‍ನ ಹಿಂಬದಿಯಲ್ಲಿ ಬರುವ ವಾಹನಗಳ ಬಗ್ಗೆ ಸ್ಪಷ್ಪವಾಗಿ ಗೋಚರಿಸಲಿದೆ.
ಚೆನ್ನೈ, ಹೈದರಾಬಾದ್, ಬೆಳಗಾವಿಗೂ ಸೇವೆ: ಹಾಲಿ ಇರುವ ಐರಾವತ ಸ್ಲೀಪರ್ ಕೋಚ್ ಸೇವೆಗಳನ್ನು ಡ್ರೀಮ್ ಕ್ಲಾಸ್ ಸೇವೆಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದು, ಮುಂದೆ ಚೆನ್ನೈ, ಹೈದರಾಬಾದ್, ಬೆಳಗಾವಿ ಇನ್ನಿತರ ಕಡೆಗಳಿಗೆ ಡ್ರೀಮ್ ಕ್ಲಾಸ್ ಬಸ್ ಗಳನ್ನು ಓಡಿಸುವ ಉದ್ದೇಶವಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ಡಿಸಿ ಆರ್.ಅಶೋಕ್ ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಬಸ್‍ಗೆ ಚಾಲನೆ ನೀಡಿದ ಸಂದರ್ಭದಲ್ಲಿ ಘಟಕದ ವ್ಯವಸ್ಥಾಪಕ ಮಹೇಶ್, ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಮಲ್ಲೇಶ್ ಮತ್ತು ಎಲ್ಲಾ ಘಟಕಗಳ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.