ಮೈಸೂರು: ಕನಿಷ್ಠ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಧಿಕಾರಿ ಕಚೇರಿ ಎದುರು ಜಮಾಯಿಸಿ, ಎಲ್ಲಾ ಕಾರ್ಮಿಕ ಹಕ್ಕನ್ನು ನಮಗೂ ನೀಡಿ, ಕನಿಷ್ಠ ವೇತನದೊಂದಿಗೆ ವಾರದ ರಜೆ ನೀಡಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಮಾಜದಲ್ಲಿ ಗೃಹ ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೆ ತುಳಿತಕ್ಕೆ ಒಳಗಾಗಿದ್ದೇವೆ. ಪಿಎಫ್, ಇಎಸ್‍ಐ, ಪಿಂಚಣಿ ಸೇರಿದಂತೆ ಮೊದಲಾದ ಸೌಲಭ್ಯ ಗಳಿಂದ ವಂಚಿತವಾಗಿ ಜೀವನ ನಿರ್ವ ಹಣೆ ಕಷ್ಟಕರವಾಗಿದೆ. 15ನೇ ಭಾರತೀಯ ಕಾರ್ಮಿಕರ ಸಮ್ಮೇಳನದಲ್ಲಿ ಶಿಫಾರಸ್ಸು ಮಾಡಿದಂತೆ ಗೃಹ ಕಾರ್ಮಿಕರಿಗೆ ಸಿಗ ಬೇಕಿದ್ದ ಕನಿಷ್ಠ ವೇತನ ಇನ್ನೂ ದೊರೆ ಯುತ್ತಿಲ್ಲ ಎಂದು ಕಿಡಿಕಾರಿದರು.
ಐಎಲ್‍ಓ (ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಷನ್) ಅಸಂಘಟಿತ ಕಾರ್ಮಿಕರಿಗೆ ಯೋಗ್ಯ ವೇತನ, ಸಾಮಾ ಜಿಕ ಭದ್ರತೆ ಮತ್ತು ಇನ್ನಿತರ ಸೌಲಭ್ಯ ಗಳನ್ನು ನೀಡಬೇಕೆಂದು ಆಗ್ರಹಿಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರಗಳು ನಿರ್ಲಕ್ಷ್ಯ ತಾಳಿವೆ. ಕೂಡಲೇ ಐಎಲ್‍ಓ ಶಿಫಾರಸ್ಸಿಗೆ ಅನು ಮೋದನೆ ನೀಡಲು ನಮ್ಮ ಆಡಳಿತ ವರ್ಗ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಬ್ಬ ಗೃಹ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕ ಮಿತ್ರ ಕೇಂದ್ರಗಳನ್ನು ತೆರೆಯಬೇಕು. ವಸತಿ ಇಲ್ಲದ ಗೃಹ ಕಾರ್ಮಿಕರಿಗೆ ವಸತಿ ಕಲ್ಪಿಸ ಬೇಕು ಎಂದು ಆಗ್ರಹಿಸಿದರು.
ರಾಮಸ್ವಾಮಿ ವೃತ್ತದಿಂದ ಜೆಎಲ್‍ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪ್ರತಿಭಟನಾ ಮೆರವಣಿಗೆ ತಲುಪಿತು. ಸಂಘಟನೆ ಮುಖಂಡರಾದ ಸಿಸ್ಟರ್ ನಿಷಾ, ಇಂದ್ರಾ, ನಾಗಮ್ಮ, ಮಂಜುಳಾ, ಸಲಹೆಗಾರ ಜರ್ಸನ್ ಸೇರಿದಂತೆ ಹಲವು ಮಂದಿ ಗೃಹ ಕಾರ್ಮಿಕ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.