ಮೈಸೂರು: ರಾಜ್ಯದ ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳ ನಾಮ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಖಾಸಗಿ ಶಾಲಾ-ಕಾಲೇಜುಗಳ ನಾಮಫಲಕಗಳಲ್ಲಿ ಬಹುತೇಕ ಆಂಗ್ಲ ಭಾಷೆಯೇ ಇದ್ದು, ಶೇ.60ರಷ್ಟು ಕನ್ನಡ ಭಾಷೆ ಬಳಕೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಖಾಸಗಿ ಶಾಲಾ-ಕಾಲೇಜು ವಾಹನಗಳ ಮೇಲೆಯೂ ಆಂಗ್ಲ ಭಾಷೆಯೇ ರಾರಾಜಿಸುತ್ತಿದ್ದು, ವಾಹನ ಮೇಲೆ ಶಾಲಾ-ಕಾಲೇಜು ಹೆಸರು ಹಾಗೂ ವಿಳಾಸವನ್ನು ಕಡ್ಡಾಯವಾಗಿ ಕನ್ನಡದಲ್ಲೇ ಹಾಕುವಂತೆ ಕ್ರಮ ಜರುಗಿಸಬೇಕು. ಕನ್ನಡ ನಾಡಿನ ನೆಲ-ಜಲ ಬಳಸಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಕಡೆಗಣಿಸಿ ಮೆರೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಕಾರ್ಯಕರ್ತರಾದ ಪಿ.ಪ್ರಜೀಶ್, ಶಾಂತಮೂರ್ತಿ, ಶಾಂತರಾಜೇ ಅರಸ್, ದರ್ಶನಗೌಡ, ಎಂ.ಬಿ.ಪ್ರಭುಶಂಕರ್, ಮಿನಿ ಬಂಗಾರಪ್ಪ, ಸುರೇಶ್, ರಾಕೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
