ಅತಿಥಿ ಉಪನ್ಯಾಸಕನಾಗಿ ಮುಂದುವರೆಸಲು ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಮೈಸೂರು

ಅತಿಥಿ ಉಪನ್ಯಾಸಕನಾಗಿ ಮುಂದುವರೆಸಲು ಆಗ್ರಹಿಸಿ ಏಕಾಂಗಿ ಪ್ರತಿಭಟನೆ

June 25, 2019

ಮೈಸೂರು, ಜೂ.24(ಎಸ್‍ಬಿಡಿ)- ಪಿಹೆಚ್.ಡಿ ಪದವಿ ಸಂಬಂಧ ಇರುವ ಗೊಂದಲ ವನ್ನು ನಿವಾರಿಸಿ, ಅತಿಥಿ ಉಪನ್ಯಾಸಕನಾಗಿ ಸೇವೆ ಮುಂದುವರೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಡಾ.ಬಿ.ಬಸವರಾಜು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಬಳಿ ಪ್ರತಿಭಟನೆ ನಡೆಸಿದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ, 2016ರಲ್ಲಿ ದಕ್ಷಿಣ ಭಾರತೀಯ ಅಧ್ಯಯನ ವಿಭಾಗ(ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ)ದಲ್ಲಿ ಪಿಹೆಚ್.ಡಿ ಪಡೆದಿದ್ದೇನೆ. ನಂತರ 2017-18ನೇ ಶೈಕ್ಷಣಿಕ ವರ್ಷದಲ್ಲಿ ತೂಬಿನ ಕೆರೆಯಲ್ಲಿರುವ ಮೈಸೂರು ವಿವಿ ಸರ್‍ಎಂವಿ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ ವಿಭಾ ಗದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ ದ್ದೇನೆ. ಆದರೆ 2018-19ನೇ ಸಾಲಿನಲ್ಲಿ ಕುಲ ಸಚಿವರಾಗಿದ್ದ ಪ್ರೊ.ಆರ್.ರಾಜಣ್ಣ ಅವರು, ನನ್ನ ಪಿಹೆಚ್.ಡಿ ಪದವಿ ವಿಷಯ ಇತಿಹಾಸ ಬೋಧನೆಗೆ ಅರ್ಹವಲ್ಲ ಎಂದು ಹೇಳಿದರು.

ಸಮಸ್ಯೆ ಪರಿಹರಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸಹ ಜಂಟಿ ನಿರ್ದೇಶಕರ ಬಳಿ ಹೋದಾಗ ದಕ್ಷಿಣ ಭಾರತೀಯ ಅಧ್ಯಯನ ವಿಭಾಗದ ಅಧ್ಯಯನ ಮಂಡಳಿ ಅಧ್ಯಕ್ಷರು ನೀಡಿದ್ದ ದೃಢೀಕರಣವನ್ನು ಪರಿಗಣಿಸದೆ, ಮೈಸೂರು ವಿವಿ ಇತಿಹಾಸ ವಿಭಾಗದಿಂದಲೇ ದೃಢೀಕರಣ ಪತ್ರ ತರಬೇಕೆಂದು ತಿಳಿಸಿದರು. ಇದಕ್ಕಾಗಿ ಕಳೆದ 9 ತಿಂಗಳಿಂದ ಕುಲಪತಿಗಳು, ಕುಲಸಚಿವರ ಕೊಠಡಿಗಳಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಜೂ.7ರಂದು ನಡೆದ ವಿವಿ ಶಿಕ್ಷಣ ಮಂಡಳಿ 3ನೇ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸುವು ದಾಗಿ ನೀಡಿದ್ದ ಭರವಸೆಯೂ ಸುಳ್ಳಾಗಿದೆ. ನನ್ನ ಪಿಹೆಚ್.ಡಿ ಸಂಬಂಧಿತ ಗೊಂದಲದ ಬಗ್ಗೆ ಚರ್ಚಿಸದೆ ಸಮಸ್ಯೆಯನ್ನು ಜೀವಂತವಾಗಿಯೇ ಉಳಿಸಿದ್ದಾರೆ. ಇದರಿಂದ ಜೀವನದಲ್ಲಿ ತುಂಬಾ ನೊಂದಿದ್ದೇನೆ. ಶೀಘ್ರ ಸಮಸ್ಯೆ ಪರಿಹರಿಸಿ, ಅತಿಥಿ ಉಪನ್ಯಾಸಕನಾಗಿ ಸೇವೆ ಮುಂದುವರೆಸಲು ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ದಯಾಮರಣ ನೀಡಿ ಎಂದು ಡಾ.ಬಸವರಾಜು ವಿವಿ ಕುಲಪತಿಗಳಿಗೆ ನೀಡಿರುವ ಮನವಿಯಲ್ಲಿ ಕೋರಿದ್ದಾರೆ.

 

Translate »