ಮೈಸೂರು, ಜೂ.27(ಎಸ್‍ಬಿಡಿ)- ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಗಂಭೀರ ಚಿಂತನೆ ನಡೆಸಬೇಕೆಂದು ಹಿರಿಯ ಶಾಸಕ, ಸಾಹಿತಿ ಅಡಗೂರು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗ ಮಂದಿರದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಿಮಾ ಪ್ರಕಾಶನದ ಸಹ ಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕøತಿ ಚಿಂತಕ, ಅಂಕಣಕಾರ ಗುಬ್ಬಿಗೂಡು ರಮೇಶ್ ಅವರ `ಮೈಸೂರು ಮಿತ್ರ’ದಲ್ಲಿ ಪ್ರಕಟಗೊಂಡ ಅಂಕಣಗಳ ಸಂಕಲನ `ಸಾಮಾನ್ಯನೊಬ್ಬನ ಸ್ವಗತ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ತಿಂಗಳಲ್ಲಿ ನಾನು 3 ಪುಸ್ತಕಗಳನ್ನು ಬಿಡು ಗಡೆ ಮಾಡಿದ್ದು, ಜೂ.30ರಂದು ಮತ್ತೊಂದು ಪುಸ್ತಕ ಬಿಡುಗಡೆ ಮಾಡಬೇಕಿದೆ. ಬರಹಗಾರರು ಹೆಚ್ಚುತ್ತಿ ದ್ದೇವೆ. ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯೂ ಹೆಚ್ಚು ತ್ತಿದೆ. ಆದರೆ ಓದುಗರ ಸಂಖ್ಯೆ ಮಾತ್ರ ಜಾಸ್ತಿಯಾಗು ತ್ತಿಲ್ಲ. ಪುಸ್ತಕ ಪ್ರಾಧಿಕಾರ ಪುಸ್ತಕಗಳ ಖರೀದಿಸಿ, ವಿತರಿ ಸುತ್ತಿದೆ. ಆದರೆ ಓದುಗರ ಹೆಚ್ಚಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿಲ್ಲ. ಮದ್ಯ ಮಾರಾಟಗಾರನೂ ಸಹ ಗ್ರಾಹಕರ ಆಕರ್ಷಿಸಲು ಬಾಟಲ್ ಮಾದರಿ, ಬಣ್ಣ ಹೇಗಿ ರಬೇಕೆಂದು ಯೋಚಿಸುತ್ತಾನೆ. ಆದರೆ ಓದುಗರ ಆಸಕ್ತಿ ಹೆಚ್ಚಿಸಲು ಯಾವ ಕ್ರಮ ಕೈಗೊಳ್ಳಬೇಕೆಂದು ನಾವು ಯೋಚಿಸುತ್ತಿಲ್ಲ. ಬಲವಂತಕ್ಕೋ, ರಿಯಾಯಿತಿ ದರದಲ್ಲಿ ಸಿಕ್ಕಿತು ಎಂಬ ಕಾರಣಕ್ಕೋ ಪುಸ್ತಕಗಳ ಕೊಂಡು ಮನೆಯ ಶೋಕೇಸ್‍ನಲ್ಲಿ ಇಡುತ್ತಾರೆಂದು ವಿಷಾದಿಸಿದರು.
ನಾನು ಕನ್ನಡ ಮತ್ತು ಸಂಸ್ಕøತಿ ಸಚಿವನಾಗಿದ್ದವನು. ಹಾಡು, ಸಂಗೀತ, ಸಾಹಿತ್ಯ ಮನಸ್ಸಿಗೆ ಮುದ ನೀಡು ತ್ತವೆ. ಗುಬ್ಬಿಗೂಡು ರಮೇಶ್ ಅವರು ಸಾಮಾನ್ಯರ ದುಃಖ-ದುಮ್ಮಾನ, ಕಷ್ಟ-ಕಾರ್ಪಣ್ಯಗಳನ್ನು ಅರ್ಥೈಸಿ ಕೊಂಡು, ಅಂಕಣಗಳಲ್ಲಿ ಹಿಡಿದಿಟ್ಟು, ಈಗ ಪುಸ್ತಕ ರೂಪದಲ್ಲಿ ಸಮಾಜಕ್ಕೆ ಅರ್ಪಿಸಿದ್ದಾರೆ. ಕೆ.ಬಿ.ಗಣಪತಿ ಅವರು ಗುಬ್ಬಿಗೂಡು ರಮೇಶ್‍ಗೆ ಅವಕಾಶ ನೀಡಿ, ಪ್ರೋತ್ಸಾಹಿಸಿದ್ದಾರೆ. ಬದುಕಿನ ಬವಣೆ, ಅನುಭವಿಸ ಲಾಗದ ಯಾತನೆ, ವೇದನೆ, ಸಂತೋಷ ಹೀಗೆ ಎಲ್ಲವನ್ನೂ ತನಗೆ ತಾನೇ ಹೇಳಿಕೊಳ್ಳುವುದೇ ಸ್ವಗತ. ಇದನ್ನು ಗುಬ್ಬಿಗೂಡು ರಮೇಶ್ ಮನಸ್ಸಿಗೆ ತಟ್ಟುವಂತೆ ನಿರೂಪಿಸಿದ್ದಾರೆ. ಹೆಚ್‍ಐವಿ ಪೀಡಿತನಿಗೆ ಬದುಕಿನ ಬಗ್ಗೆ ಭರವಸೆ, ನಂಬಿಕೆ ಗಟ್ಟಿಗೊಳಿಸುವ ಅಂಕಣವೂ ಇಲ್ಲಿದೆ. ಹೀಗೆಯೇ ಬರವಣಿಗೆ ಮುಂದುವರೆಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಮಯ ಪಾಲನೆ: ಸುತ್ತೂರು ಶ್ರೀಗಳು ಕಾರ್ಯಕ್ರಮ ದಲ್ಲಿ ಭಾಗಿಯಾಗುತ್ತಾರೆಂದು ತಿಳಿದು 20 ನಿಮಿಷ ಮುಂಚಿತವಾಗಿಯೇ ಬಂದಿದ್ದೆ. ಶ್ರೀಗಳು ಸಮಯಕ್ಕೆ ಸರಿಯಾಗಿ ಬರುವುದನ್ನು ಕಲಿಸುತ್ತಿದ್ದಾರೆ. ನಾನು ಮಂತ್ರಿಯಾಗಿದ್ದಾಗ ದೇ.ಜವರೇಗೌಡರ(ದೇಜಗೌ) ಭೇಟಿಯ ನಂತರ ಹಾ.ಮಾ.ನಾಯಕ್ ಅವರ ಮನೆಗೆ ಹೋಗಿದ್ದೆ. ತಿಳಿಸಿದ್ದ ಸಮಯಕ್ಕಿಂತ 15 ನಿಮಿಷ ತಡ ವಾಗಿದ್ದರಿಂದ ಅವರು ನನ್ನನ್ನು ಪ್ರಶ್ನಿಸಿದ್ದರು. ನೀವು ಏನೇ ಮಾಡಿ. ಮೊದಲು ಸಮಯ ಪಾಲನೆ ಹಾಗೂ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕಿವಿಮಾತು ಹೇಳಿದ್ದರೆಂದು ವಿಶ್ವನಾಥ್ ಸ್ಮರಿಸಿಕೊಂಡರು.
`ಶ್ರೀ’ಕಾರ ನೀಡಿದ ಕುವೆಂಪು: ಲೇಖಕ ಗುಬ್ಬಿ ಗೂಡು ರಮೇಶ್ ಅವರಿಂದ ಮೊದಲ ಕೃತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಸಂಗೀತ ನಿರ್ದೆಶಕ ಹಂಸ ಲೇಖ, ದ.ರಾ.ಬೇಂದ್ರೆ ಅವಸ್ಥೆಗಳ ಕವಿ. ಬಡತನ ವನ್ನು ಬೆನ್ನಿಗೆ ಕಟ್ಟಿಕೊಂಡೇ ಅಲೆದಾಡಿದರು. ಆದರೆ ಕುವೆಂಪು ದೇಹವೇ ಅಲುಗದ ಮಹಾಪ್ರತಿಭೆ. ಮಹಾ ರಾಜರಂತಹ ಆಕಾರ, ಶ್ರೀಮಂತ ಭಾಷೆ ಅವರ ದ್ದಾಗಿತ್ತು. ಗಾಂಭೀರ್ಯದಲ್ಲೇ ರೈತನನ್ನು ಯೋಗಿ ಎಂದು ಕರೆದರು. ನಾವೆಲ್ಲಾ ಶ್ರೀಸಾಮಾನ್ಯ ಎಂದು ಕರೆಯುತ್ತೇವೆ. ಸಾಮಾನ್ಯನಿಗೆ `ಶ್ರೀ’ಕಾರ ನೀಡಿದ್ದೇ ಕುವೆಂಪು ಎಂದು ತಿಳಿಸಿದರು.
ಗುಬ್ಬಿಗೂಡು ರಮೇಶ್ ನನಗೆ 25 ವರ್ಷಗಳ ಗೆಳೆಯ, ಶಿಷ್ಯ ಹಾಗೂ ಹಿತೈಷಿ. ಚಿಕ್ಕ ವಿಷಯಗಳಿಗೂ ತುಂಬಾ ಸಂಭ್ರಮಿಸುತ್ತಾನೆ. ಪ್ರತಿ ಲೇಖನದ ಕರಡನ್ನು ನನಗೆ ಕಳುಹಿಸುತ್ತಾನೆ. ಆಡು ಭಾಷೆಯನ್ನು ಗ್ರಾಂಥಿಕ ಭಾಷೆಯೊಂದಿಗೆ ಕಸಿ ಮಾಡುವ ಪ್ರಯತ್ನ ನಡೆಸುತ್ತಿ ರುತ್ತಾರೆ. ಚೆಂದವಾಗಿ ಹಾಡು, ನಾಟಕವನ್ನೂ ಬರೆಯ ಬಲ್ಲ ಪ್ರತಿಭಾವಂತ. ಮಾತುಗಾರ, ನಾಟಕಗಾರ, ಕತೆಗಾರ, ಉಪಾಧ್ಯಾಯ ಆದರೆ ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ. ಸಂಗೀತ ಜೀವನದ ಗತಿಯಾದರೆ ಸಾಹಿತ್ಯ ಜೀವನದ ಸ್ಥಿತಿಯನ್ನು ತೋರಿಸುತ್ತದೆ. ಎಲ್ಲರಿಂದ ಕಟ್ಟುವ ಕೆಲಸ ವಾಗಬೇಕು. ಹೊಳೆದದ್ದು ಹೊಳೆಯಾಗಿ ಹರಿಯಬೇಕು. ಇಂತಹ ಹತ್ತಾರು ಪುಸ್ತಕಗಳ ಬರೆಯುವ ಮೂಲಕ ನವ ಜಾನಪದವನ್ನು ಕನ್ನಡ ನಾಡಿಗೆ ಪ್ರಸಾರ ಮಾಡುವ ಸಾಂಸ್ಕøತಿಕ ರಾಯಭಾರಿಯಾಗಬೇಕು. ಗುಬ್ಬಿಗೂಡನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಆಶಿಸಿದರು. ಸುತ್ತೂರು ಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಅಂಕಣಕಾರ ಜೋಗಿ ಕೃತಿ ಕುರಿತು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕ ಎಲ್.ನಾಗೇಂದ್ರ, ಮಹಿಮಾ ಪ್ರಕಾಶನದ ಪ್ರಕಾಶಕ ಕೆ.ವಿ.ಶ್ರೀನಿವಾಸ್, ಲೇಖಕ ಗುಬ್ಬಿಗೂಡು ರಮೇಶ್, ರಂಗಕರ್ಮಿ ರಾಜ ಶೇಖರ ಕದಂಬ, ಯಡಿಯೂರು ಸಮೀವುಲ್ಲಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.