ಹಾಸನ, ಬೇಲೂರು ಕೊಳಚೆಯಿಂದ ಯಗಚಿ ಜಲಾಶಯ ಮಲಿನ
ಹಾಸನ

ಹಾಸನ, ಬೇಲೂರು ಕೊಳಚೆಯಿಂದ ಯಗಚಿ ಜಲಾಶಯ ಮಲಿನ

July 4, 2019

* ಕುಡಿಯುವ ನೀರೇ ವಿಷವಾದರೆ ಜನ-ಜಾನುವಾರುಗಳ ಪರಿಸ್ಥಿತಿ ಏನು?

* ಹಾಸನ, ಬೇಲೂರಿನ ಗಲೀಜು ನೀರು ನದಿ ಸೇರದಂತೆ ಯೋಜನೆ ರೂಪಿಸಿ

* ಪರಿಸರ ಮಾಲಿನ್ಯ ನಿಯಂತ್ರಣ-ಕೊಳಚೆ ನಿರ್ಮೂಲನಾ ಮಂಡಳಿಗೆ ಡಿಸಿ ಸೂಚನೆ

ಹಾಸನ: ಎಲ್ಲೆಲ್ಲೂ ಕುಡಿಯುವ ನೀರು ಸಮರ್ಪಕವಾಗಿ ಲಭಿಸದೇ ಜನ-ಜಾನುವಾರು ಪರದಾಡುತ್ತಿದ್ದರೆ, ಇಲ್ಲಿ ಹಾಸನ ಮತ್ತು ಬೇಲೂರಿನ ಕೊಳಚೆ ನೀರು ನದಿ ಸೇರುವಂತೆ ಮಾಡಿ ಯಗಚಿ ಜಲಾ ಶಯವನ್ನೇ ಮಲಿನಗೊಳಿಸಲಾಗುತ್ತಿದೆ. ಇದರಿಂದ ನಮ್ಮ ಊಟದ ತಟ್ಟೆಗೆ ನಾವೇ ವಿಷ ಬಡಿಸಿಕೊಂಡಂತೆ ಆಗುತ್ತಿದೆ.

ಈ ವಿಚಾರದಲ್ಲಿ ತಡವಾಗಿಯಾದರೂ ಎಚ್ಚೆತ್ತಿರುವ ಜಿಲ್ಲಾಡಳಿತ, ನಗರಗಳ ದ್ರವ ತ್ಯಾಜ್ಯ ಯಗಚಿ ಜಲಾಶಯ ಸೇರದಂತೆ ತಡೆಯಲು ಈಗ ಮುಂದಾಗಿದೆ.

ನದಿಗೆ ಹಾಸನ ನಗರ ಮತ್ತು ಬೇಲೂರು ಪಟ್ಟಣದ ಕಲುಷಿತ ನೀರು ಸೇರುತ್ತಿರು ವುದರಿಂದ ಯಗಚಿ ಜಲಾಶಯ ಮಲಿನ ಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಸ್ಕøತ ಯೋಜನೆಯ ವರದಿ ಸಿದ್ಧಪಡಿಸಿ ಆದಷ್ಟೂ ಬೇಗ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಷಾಷ ಅವರು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ನಗರ ನೀರು ಸರಬರಾಜು ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ನಡೆದ ಪರಿಸರ ಸಂರಕ್ಷಣಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಯಗಚಿ ನದಿ ಮಲಿನ ವಾಗುತ್ತಿರುವ ಬಗ್ಗೆ ಅಧಿಕಾರಿಗಳು ನೀಡಿದ ವಿವರಣೆ ಕೇಳಿ ಜಿಲ್ಲಾಧಿಕಾರಿ ಕಳವಳ ವ್ಯಕ್ತ ಪಡಿಸಿದರು. ಯಗಚಿ ನದಿಗೆ ವಿವಿಧ ಮೂಲ ಗಳಿಂದ ಕೊಳಚೆ ನೀರು ಸೇರುತ್ತಿರುವು ದನ್ನು ಪೂರ್ಣ ನಿಯಂತ್ರಿಸಲು ಆಗತ್ಯವಾದ ಎಲ್ಲಾ ಕ್ರಮಗಳನ್ನೂ ಹಾಸನ ಮತ್ತು ಬೇಲೂರು ಪಟ್ಟಣದ ಸ್ಥಳೀಯ ಸಂಸ್ಥೆಗಳು ಕೈಗೊಳ್ಳ ಬೇಕು ಎಂದು ನಿರ್ದೇಶನ ನೀಡಿದರು.

ಶುದ್ಧೀಕರಿಸಿ: ಯಗಚಿ ನದಿಗೆ ಕೊಳಚೆ ನೀರು ಸೇರ್ಪಡೆಗೊಳ್ಳುತ್ತಿರುವ ಎಲ್ಲಾ ಪ್ರದೇಶಗಳು ಮತ್ತು ಅದರ ಮೂಲಗಳನ್ನು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಮೊದಲು ಪತ್ತೆ ಮಾಡಬೇಕು. ಕೊಳಚೆ ನೀರು ನದಿ ಸೇರದಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಕೊಳಚೆ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಅಕ್ರಂ ಪಾಷ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಗಳ ಕೊಳಚೆ ನೀರು ಶುದ್ದಿಕರಣ ಘಟಕ ಗಳನ್ನು ಮುಂದಿನ 15-20 ವರ್ಷಗಳ ಜನಸಂಖ್ಯೆ ಬೆಳವಣಿಗೆಯನ್ನು ಗುರುತಿಸಿ ಮೇಲ್ದರ್ಜೇಗೇರಿಸಲು ಕ್ರಮ ವಹಿಸಿ ಎಂದು ಸೂಚಿಸಿದರು. ಹಾಸನ ನಗರಸಭೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರೂ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬೇಲೂರು ಪಟ್ಟಣದ ಭೌಗೊಳಿಕ ಪರಿಸ್ಥಿತಿಗೆ ಅನುಗುಣವಾಗಿ ಕಲುಷಿತ ನೀರನ್ನು ಶುದ್ಧೀಕರಿಸುವ 4 ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಾಸನದ ವಿದ್ಯಾನಗರ, ವಿಜಯನಗರ ಮತ್ತು ಕೆಲವು ಕೊಳಚೆ ಪ್ರದೇಶಗಳಲ್ಲಿ ಮನೆಗಳ ಶೌಚಾಲಯದ ನೀರಿನ ಪೈಪುಗಳನ್ನು ಒಳಚರಂಡಿಗೆ ಸಂರ್ಪಕಿಸಬೇಕಿದೆ. ಹಲವೆಡೆ ಪೈಪ್‍ಲೈನ್‍ಗಳಲ್ಲಿ ವ್ಯತ್ಯಾಸವಾಗಿ ಕಲುಷಿತ ನೀರು ಸೋರಿಕೆಯಾಗುತ್ತಿದೆ. ಇದನ್ನೆಲ್ಲಾ ಸರಿಪಡಿಸಬೇಕಿದೆ. ಹಾಸನ ನಗರದ ಕೊಳಚೆ ನೀರು ಶುದ್ಧೀಕರಣ ಘಟಕ ಕೇವಲ 10 ಎಂಎಡಿ ಸಾಮಥ್ರ್ಯದ್ದಾಗಿದೆ. ಅಮೃತ ಯೋಜನೆಯೂ ಅನುಷ್ಠಾನವಾಗುತ್ತಿರುವುದರಿಂದ ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು 40 ಎಂಎಲ್‍ಡಿ ಸಾಮಥ್ರ್ಯದ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
– ಜಗದೀಶ್, ಎಇಇ, ನಗರ ನೀರು ಸರಬರಾಜು-ಒಳಚರಂಡಿ ಮಂಡಳಿ

ಹಾಸನ ನಗರಕ್ಕೆ ಹೊಂದಿಕೊಂಡಂತಿರುವ ವಿದ್ಯಾನಗರ, ವಿಜಯನಗರ ಮತ್ತಿತರ ಪ್ರದೇಶಗಳಿಂದ ಕೊಳಚೆ ನೀರು ಹುಣಸಿನಕೆರೆ ಹಾಗೂ ಇತರ ಕೆರೆಗಳನ್ನು ಸೇರುತ್ತಿದೆ. ಅಲ್ಲಿಂದ ಕೋಡಿ ಬಿದ್ದು ನೀರು ಯಗಚಿ ನದಿ ಸೇರುತ್ತಿದೆ. ಈ ಎಲ್ಲಾ ,ಪ್ರದೇಶಗಳಲ್ಲಿನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಬೇಕಿದೆ. ಜತೆಗೆ ಕೊಳಚೆ ನೀರು ಶುದ್ಧೀಕರಣ ಘಟಕಗಳು ಸ್ಥಾಪನೆಯಾಗಬೇಕಿದೆ.
– ಪರಮೇಶ್, ಆಯುಕ್ತ, ನಗರಸಭೆ

Translate »