ಎನ್‍ಡಿಎ ಎರಡನೇ ಅವಧಿಯ ಚೊಚ್ಚಲ ಬಜೆಟ್ ಮಂಡಿಸಿದ ದೇಶದ ದ್ವಿತೀಯ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಎನ್‍ಡಿಎ ಸರ್ಕಾರದ ಮೊದಲ ಬಜೆಟ್ ಅನ್ನು ಇಂದು ಎರಡನೇ ಮಹಿಳಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ದೇಶದ ಬಡವರಿಗೆ ಬರೆ ಹಾಕದೆ, ಶ್ರೀಮಂತರಿಗೆ ಕೊಂಚ ಹೊರೆಯಾದರೂ ವಿವೇಚನೆಯಿಂದ ಕೂಡಿದ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ವಸತಿ ರಹಿತ ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕ ವರ್ಗದವರಿಗೆ ಭರಪೂರ ಕೊಡುಗೆಯನ್ನು ನೀಡಿರುವ ಅವರು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗಳಿಗೆ ಕಾಯ್ದುಕೊಳ್ಳುವ ಮೂಲಕ ಮಧ್ಯಮ ವರ್ಗದವರ ಸಹಾಯಕ್ಕೂ ನಿಂತಿದ್ದಾರೆ.
ನಯ-ನಾಜೂಕಾಗಿ ತೆರಿಗೆ ಸಂಗ್ರಹಿಸಲು ಯೋಜನೆ ರೂಪಿಸಿಕೊಂಡಿರುವ ಹಣಕಾಸು ಸಚಿವರು, 5 ವರ್ಷದ ಹಿಂದೆ ಭಾರತದ ಆರ್ಥಿಕತೆ ಜಗತ್ತಿನಲ್ಲಿ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 5ನೇ ಸ್ಥಾನದಲ್ಲಿದೆ. ಪ್ರಸ್ತುತ ಭಾರತದಲ್ಲಿ 3 ಟ್ರಿಲಿಯನ್ ಆರ್ಥಿಕತೆ ಇದ್ದು, ಅದನ್ನು ಐದು ವರ್ಷಗಳಲ್ಲಿ 5 ಟ್ರಿಲಿಯನ್‍ಗೇರಿಸುವ ಆರ್ಥಿಕತೆ ಯೋಜನೆ ರೂಪಿಸುವ ಮೂಲಕ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧ ರಾಗಿದ್ದೇವೆ ಎಂದು ಅವರು ಘೋಷಿಸಿದರು. ಈವರೆವಿಗೂ ಬ್ರಿಟಿಷರು ಹಾಕಿಕೊಟ್ಟ ಸಂಪ್ರದಾಯದಂತೆ ಹಣಕಾಸು ಸಚಿವರು ಬಜೆಟ್ ದಾಖಲೆಗಳನ್ನು ಕೆಂಪು ಬಣ್ಣದ ಸೂಟ್‍ಕೇಸ್‍ನಲ್ಲಿ ತರುತ್ತಿದ್ದರು. ಆದರೆ ಅದಕ್ಕೆ ಇತಿಶ್ರೀ ಹಾಡಿದ ನಿರ್ಮಲಾ ಸೀತಾ ರಾಮನ್ ಅವರು ಸಾಂಪ್ರದಾಯಿಕ `ಬಹಿ ಖಾತಾ’ದೊಳಗೆ (ದೇಶದ ಲಾಂಛನ ಹೊಂದಿರುವ ಕೆಂಪು ವಸ್ತ್ರದಲ್ಲಿ ಸುತ್ತಲಟ್ಟ ಫೈಲ್) ಬಜೆಟ್ ದಾಖಲೆಗಳನ್ನು ತಂದಿದ್ದರು. 127 ನಿಮಿಷ ಸುದೀರ್ಘವಾಗಿ ಬಜೆಟ್
ಮಂಡಿಸಿದ ಅವರು, ಬಸವಣ್ಣನವರ `ಕಾಯಕವೇ ಕೈಲಾಸ’ ಸಾಲುಗಳನ್ನು ಉಲ್ಲೇಖಿ ಸಿದರು. ಹೊರೆಯಾಗದೆ ತೆರಿಗೆ ಸಂಗ್ರಹಿಸುವ ಬಗ್ಗೆ ಹೇಳುವಾಗ ತಮಿಳುನಾಡಿನ ಪಾಂಡಿಯನ್ ಮಹಾರಾಜನಿಗೆ ತಮಿಳು ಕವಿ ಪಿಸಿರಾಂಡೈಯಾರ್ ಕಾವ್ಯದ ಮೂಲಕ ನೀಡಿದ ಸಲಹೆಯನ್ನು ಉಲ್ಲೇಖಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಂತರ ಕೇಂದ್ರ ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿರ್ಮಲಾ ಸೀತಾರಾಮನ್, ಇಂಗ್ಲೀಷ್‍ನಲ್ಲಿ ಬಜೆಟ್ ಭಾಷಣ ಓದಿದರಾ ದರೂ, ಮಧ್ಯೆ ಹಿಂದಿ, ಉರ್ದು, ತಮಿಳು ಹಾಗೂ ಕನ್ನಡ ಪದಗಳನ್ನು ನಿರರ್ಗಳವಾಗಿ ಬಳಸುವ ಮೂಲಕ ಶಹಭಾಷ್‍ಗಿರಿ ಗಿಟ್ಟಿಸಿದರು. ಮಹಿಳಾ ಸಶಕ್ತೀಕರಣದ ಸ್ವಾಮಿ ವಿವೇಕಾನಂದರ ವಾಣಿ `ನಾರೀ ತು ನಾರಾಯಣಿ’ ಉಲ್ಲೇಖಿಸಿದಾಗ ಇಡೀ ಸದನ ಮೇಜು ತಟ್ಟಿ ಪ್ರಶಂಸಿಸಿತು. ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಆದಾಯ ತೆರಿಗೆ ಮಿತಿ 5 ಲಕ್ಷಕ್ಕೆ ಏರಿಸಲಾಗಿದ್ದು, ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. ಆದಾಯವು 5 ಕೋಟಿ ರೂ. ದಾಟಿದರೆ ಶೇ.25ರಷ್ಟು ಆದಾಯ ತೆರಿಗೆ, ಶೇ.7 ಸೆಸ್, 2 ಕೋಟಿಯಿಂದ 5 ಕೋಟಿವರೆಗಿನ ವಾರ್ಷಿಕ ಆದಾಯಕ್ಕೆ ಶೇ.3ರಷ್ಟು ಸೆಸ್ ವಿಧಿಸಲಾಗಿದೆ. ಆದಾಯ ತೆರಿಗೆ ಸ್ಲ್ಯಾಬ್‍ನಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಇನ್ನು ಮುಂದೆ ಆದಾಯ ತೆರಿಗೆ ಲೆಕ್ಕ ಪತ್ರ ಸಲ್ಲಿಕೆಗೆ ಪಾನ್‍ಕಾರ್ಡ್ ಕಡ್ಡಾಯವಿಲ್ಲ. ಆಧಾರ್ ಸಂಖ್ಯೆ ನಮೂದಿಸಿ ಐಟಿ ರಿಟನ್ರ್ಸ್ ಸಲ್ಲಿಸಬಹುದು. ಅನಿವಾಸಿ ಭಾರತೀಯರು ದೇಶಕ್ಕೆ ಕಾಲಿಟ್ಟ ಕ್ಷಣವೇ ಅವರಿಗೆ ಆಧಾರ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
2022ರ ವೇಳೆಗೆ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಮತ್ತು ನೀರು ಒದಗಿಸಲಾ ಗುವುದು ಎಂದು ಪ್ರಕಟಿಸಿರುವ ವಿತ್ತ ಸಚಿವರು, ಕೃಷಿ, ಗ್ರಾಮೀಣ ಅಭಿವೃದ್ಧಿ ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಕ್ರೆಡಿಟ್ ಕಾರ್ಡ್ ಪೇಮೆಂಟ್ ಗಳ ಮೇಲೆ ಇನ್ನು ಮುಂದೆ ಶುಲ್ಕ ಇರುವುದಿಲ್ಲ. 1 ವರ್ಷದಲ್ಲಿ ಒಂದೇ ಬ್ಯಾಂಕ್ ಖಾತೆಯಿಂದ ಕೋಟಿ ಹಣ ಡ್ರಾ ಮಾಡಿದರೆ ಶೇ.2ರಷ್ಟು ಡಿಟಿಎಸ್ ವಿಧಿಸಲಾಗುತ್ತದೆ.
ದೇಶದ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ರಕ್ಷಣಾ ಸಾಮಗ್ರಿಗಳಿಗೆ ಇನ್ನು ಮುಂದೆ ಕಸ್ಟಮ್ಸ್ ತೆರಿಗೆ ಇಲ್ಲ. ಸ್ವದೇಶಿ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ 1 ರೂ. ಹೆಚ್ಚಳ ಮಾಡಲಾಗಿದ್ದು, ಎಲೆಕ್ಟ್ರಾನಿಕ್ ವಾಹನ ಖರೀದಿದಾರರಿಗೆ 1.25 ಲಕ್ಷದವರೆಗೆ ಸಬ್ಸಿಡಿ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ.5ರಷ್ಟು ಜಿಎಸ್‍ಟಿ ಇಳಿಕೆ ಮಾಡಲಾಗಿದೆ. ಬ್ಯಾಂಕ್‍ಗಳ ಏಕೀಕರಣಕ್ಕೆ ಒತ್ತು ನೀಡಲಾಗಿದ್ದು, ಬ್ಯಾಂಕ್‍ಗಳ 1 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ರಿಕವರಿಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ರಂಗದ ಬ್ಯಾಂಕ್‍ಗಳಿಗೆ 70 ಸಾವಿರ ಕೋಟಿ ರೂ. ಮರುಪಾವತಿ ಮಾಡಲಾಗುವುದು. ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂ. ಓವರ್ ಡ್ರಾಫ್ಟ್ ನೀಡಲಾಗುವುದು. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿ ಸಾಲ ನೀಡಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾರೀ ತು ನಾರಾಯಣಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಹಾಗೂ ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಹಣದ ನೆರವು ನೀಡಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ರೂ. ಪೆನ್ಷನ್ ನೀಡಲಾಗುವುದು. ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಷನ್ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಸ್ವಚ್ಛ ಭಾರತ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ. ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಈಗಾಗಲೇ 26 ಲಕ್ಷ ಮನೆಗಳು ನಿರ್ಮಾಣವಾಗಿದೆ. 24 ಲಕ್ಷ ಕುಟುಂಬಗಳಿಗೆ ನೂತನ ತಂತ್ರಜ್ಞಾನದ ಆಧುನಿಕ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ ಜಲ ಶಕ್ತಿ ಸಚಿವಾಲಯ ಸ್ಥಾಪಿಸಲಾಗುತ್ತಿದ್ದು, ಹರ್ ಘರ್ ಜಲ್ ಯೋಜನೆ ಮೂಲಕ ಪ್ರತೀ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು ನೀಡಲಾಗಿದೆ. ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧರಿಸಲಾಗಿದೆ. ದೇಶದ ಶೇ.97ರಷ್ಟು ಗ್ರಾಮಗಳಿಗೆ ಸರ್ವ ಋತು ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ 5 ವರ್ಷಗಳಲ್ಲಿ 25 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಹಾಗೂ 1.25 ಲಕ್ಷ ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ.