ಮೈಸೂರು,ಜು.7-ಚಾಮುಂಡಿಬೆಟ್ಟದ ಏಕಶಿಲಾ ನಂದಿ ವಿಗ್ರಹದ ಬಿರುಕು ಬಿಟ್ಟ ಭಾಗಕ್ಕೆ ಕಲ್ಲಿನ ಪುಡಿ ಮಿಶ್ರಣದೊಂದಿಗೆ ಗೋಂದು ಬಳಸಿ ಹೆಚ್ಚಿನ ಹಾನಿ ಆಗುವು ದನ್ನು ತಡೆಗಟ್ಟಲಾಗಿದೆ.
ಏಕಶಿಲಾ ನಂದಿ ವಿಗ್ರಹದ ತುಟಿಯ ಭಾಗ, ಬಲ ಬದಿಯ ಪಕ್ಕೆಯ ಬಳಿ ಹಾಗೂ ಬೆನ್ನಿನ ಮೇಲೆ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿತ್ತು. ಇದು ಆತಂಕವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪುರಾತತ್ವ ಮತ್ತು ಪಾರಂಪರಿಕ ಇಲಾಖೆ ನಂದಿ ವಿಗ್ರಹಕ್ಕೆ ಉಂಟಾಗಬಹುದಾದ ದೊಡ್ಡ ಪ್ರಮಾಣದ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡು ಏಕ ಶಿಲಾ ಮೂರ್ತಿಯಲ್ಲಿ ಕಂಡು ಬಂದಿದ್ದ ಬಿರುಕಿಗೆ ಕಲ್ಲಿನ ಪುಡಿಗೆ ಗೋಂದನ್ನು (ಗಮ್) ಮಿಶ್ರಣ ಮಾಡಿ ಬಿರುಕು ಬಿಟ್ಟ ಸ್ಥಳಕ್ಕೆ ಲೇಪನ ಮಾಡಿದ್ದಾರೆ. ಇದರಿಂದ ಪ್ರತಿಮೆಗೆ ಆಗಬಹುದಾದ ಹೆಚ್ಚಿನ ಹಾನಿಯನ್ನು ತಡೆಗಟ್ಟಿದಂತಾಗಿದೆ.
ಸಮುದ್ರ ಮಟ್ಟದಿಂದ 3489 ಅಡಿ ಎತ್ತರದಲ್ಲಿರುವ ಚಾಮುಂಡಿಬೆಟ್ಟದಲ್ಲಿ 700ನೇ ಮೆಟ್ಟಿಲ ಬಳಿ ಮೈಸೂರು ಸಂಸ್ಥಾ ನದ ದೊಡ್ಡ ದೇವರಾಜೇ ಅರಸ್ ಅವರು 1659ರಿಂದ 1673 ಅವಧಿಯಲ್ಲಿ 24 ಅಡಿ. ಉದ್ದ, 15 ಅಡಿ ಎತ್ತರದ ಏಕಶಿಲಾ ನಂದಿ ಮೂರ್ತಿಯನ್ನು ಕೆತ್ತಿಸಿದ್ದರು. ಅಂದಿ ನಿಂದ ಪ್ರತೀ ವರ್ಷ ನಂದಿ ಮೂರ್ತಿಗೆ ಅಭಿಷೇಕ ಮಾಡಿ ಪೂಜಿಸುವ ಸಂಪ್ರ ದಾಯವನ್ನು ಅನುಸರಿಸುತ್ತಾ ಬರಲಾ ಗಿತ್ತು. ವಿವಿಧ ಕಾರಣಗಳಿಂದ ಕೆಲವು ವರ್ಷ ನಂದಿ ಮೂರ್ತಿಗೆ ಅಭಿಷೇಕ ಮಾಡುವ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಕಳೆದ 1 ದಶಕದಿಂದ ಚಾಮುಂಡಿಬೆಟ್ಟ ಹತ್ತುವ ವರು ಬೆಟ್ಟದ ಬಳಗ ಸಮಿತಿಯೊಂದನ್ನು ಮಾಡಿಕೊಂಡು ಪ್ರತೀ ವರ್ಷ ವಿವಿಧ ಬಗೆಯ ದ್ರವ್ಯಗಳಿಂದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸುತ್ತಾ ಬಂದಿ ದ್ದರು. ಇತ್ತೀಚೆಗೆ ವಾಟರ್ ಜೆಟ್ ಬಳಸಿ ನಂದಿ ಮೂರ್ತಿಯನ್ನು ಸ್ವಚ್ಛಗೊಳಿಸ ಲಾಗಿತ್ತು. ನೀರು ರಭಸವಾಗಿ ಮೂರ್ತಿಗೆ ಅಪ್ಪಳಿಸಿದ್ದು ಬಿರುಕು ಬಿಡಲು ಕಾರಣ ಎಂದು ಭಕ್ತರು ಆರೋಪಿಸಿದ್ದಾರೆ.
ಈ ಕುರಿತಂತೆ ಪಾರಂಪರಿಕ ಸಮಿತಿಯ ಪ್ರೊ.ಎಂ.ಎಸ್.ರಂಗರಾಜು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಬಿರುಕು ಬಿಟ್ಟ ನಂದಿ ಮೂರ್ತಿಗೆ ಗೋಂದಿನೊಂದಿಗೆ ಕಲ್ಲಿನ ಪುಡಿ ಮಿಶ್ರಣ ಮಾಡಿ ಲೇಪನ ಮಾಡಿರುವುದು ಸರಿಯಾದ ಕ್ರಮವಾಗಿದೆ. ಇದರಿಂದ ಹಾನಿಯಾಗುವುದನ್ನು ತಡೆಗಟ್ಟಿದಂತೆ ಆಗುತ್ತದೆ. ಪಾರಂಪರಿಕ ಸಮಿತಿಯಿಂದ ಈಗಾಗಲೇ ನಂದಿ ಮೂರ್ತಿಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸಲಾಗಿದೆ. ಮೂರ್ತಿ ಯಲ್ಲಿ ಬಿರುಕು ಬಿಟ್ಟಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಗಂಭೀರ ಸ್ವರೂಪದ ಬಿರುಕುಗಳು ಕಂಡುಬಂದಿಲ್ಲ. ಆದರೂ ಸಮಿತಿ ವತಿಯಿಂದ ಏನು ಮಾಡಬೇಕು ಎಂಬುದನ್ನು ವರದಿ ಮೂಲಕ ಸಲ್ಲಿಸಿದ್ದೇವೆ. ತುರ್ತಾಗಿ ಕ್ರಮ ಕೈಗೊಂಡರೆ ಉತ್ತಮ ಎಂಬ ಅಭಿಪ್ರಾಯವನ್ನು ಮಂಡಿಸಿದ್ದೇವೆ ಎಂದರು.
ಎಂ.ಟಿ.ಯೋಗೇಶ್ ಕುಮಾರ್