ಕೆಲಸಕ್ಕೆ ಸೇರಿದ ಮೊದಲ ದಿನ ಜೀವನದ ಕಡೇ ದಿನವೂ ಆಯ್ತುತೀವ್ರ ಹೃದಯಾಘಾತದಿಂದ ಯುವಕ ಸಾವು
ಮೈಸೂರು

ಕೆಲಸಕ್ಕೆ ಸೇರಿದ ಮೊದಲ ದಿನ ಜೀವನದ ಕಡೇ ದಿನವೂ ಆಯ್ತುತೀವ್ರ ಹೃದಯಾಘಾತದಿಂದ ಯುವಕ ಸಾವು

July 19, 2019

ಮೈಸೂರು,ಜು.18(ಆರ್‍ಕೆ)-ಕೆಲಸಕ್ಕೆ ಸೇರಿದ ಮೊದಲ ದಿನವೇ ಯುವಕನ ಪಾಲಿಗೆ ಜೀವನದ ಕಡೇ ದಿನವಾದ ಹೃದಯ ಕಲಕುವ ಘಟನೆ ಮೈಸೂರಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮೈಸೂರು ಗಾಂಧಿನಗರದ ಅಣ್ಣಮ್ಮ ಕೇರಿ 2ನೇ ಕ್ರಾಸ್ ನಿವಾಸಿ ಎನ್. ರಾಜು ಅವರ ಮಗ ಆರ್.ಪರಶುರಾಂ (26) ಸಾವನ್ನಪ್ಪಿದ ಯುವಕ. ನಿವೃತ್ತ ಕೆಎಸ್‍ಆರ್‍ಟಿಸಿ ನೌಕರನಾದ ರಾಜು ಅವರ ಮಗ ಪರಶುರಾಂ ಇದುವರೆಗೂ ನಿರುದ್ಯೋಗಿಯಾಗಿದ್ದು, ಜೀವನೋಪಾಯಕ್ಕಾಗಿ ಬುಧವಾರವಷ್ಟೇ ಮಂಡಿ ಮೊಹ ಲ್ಲಾದ ನಿಮಿಷಾಂಬ ಎಂಟರ್‍ಪ್ರೈಸಸ್ ನಂದಿನಿ ಹಾಲಿನ ಏಜೆನ್ಸಿಯೊಂದರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದರು. ಹಾಲಿನ ವಾಹನವು ಮಧ್ಯರಾತ್ರಿ ಬರುವುದರಿಂದ ಹಾಲು ಇಳಿಸಿಕೊಳ್ಳಲು ರಾತ್ರಿ ಬರುವಂತೆ ಏಜೆನ್ಸಿ ಮಾಲೀಕರು ಹೇಳಿದ್ದರಿಂದ ಬುಧವಾರ ರಾತ್ರಿ 10 ಗಂಟೆಗೆ ಹೋಗಿ ಅಲ್ಲಿಯೇ ಮಲಗಿದ್ದು ನಿಗದಿಯಂತೆ ಹಾಲಿನ ಲಾರಿ ಮುಂಜಾನೆ 2-15 ಗಂಟೆಗೆ ಬಂದಿದೆ. ಪರಶುರಾಂ ಎದ್ದು ಲಾರಿಯಿಂದ ಹಾಲಿನ ಕ್ರೇಟ್‍ಗಳನ್ನು ಇಳಿಸಿಕೊಳ್ಳಲು ಮುಂದಾಗಿದ್ದಾರೆ. ಒಂದು ಕ್ರೇಟ್ ಇಳಿಸಿ ಎರಡನೇ ಕ್ರೇಟ್ ಇಳಿಸುವಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡ ಕಾರಣ, ಕುಸಿದು ಬಿದ್ದ ಪರಶುರಾಂರನ್ನು ತಕ್ಷಣ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅವರನ್ನು ಪರೀಕ್ಷಿಸಿದ ವೈದ್ಯರು, ಇಸಿಜಿ, ಟ್ರೆಡ್‍ಮಿಲ್ ಟೆಸ್ಟ್ ಮಾಡುತ್ತಿದ್ದಾಗಲೇ ಪರಶುರಾಂ ಮುಂಜಾನೆ ಸುಮಾರು 2.50 ಗಂಟೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಕೆಲಸಕ್ಕೆ ಸೇರಿದ ಎಂಬ ಖುಷಿಯಲ್ಲಿ ಮಗನನ್ನು ಕಳುಹಿಸಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದ ತಂದೆ-ತಾಯಿ ಮಗ ಮೊದಲ ದಿನವೇ ಸಾವನ್ನಪ್ಪಿದ ಎಂಬ ಮಾಹಿತಿ ತಿಳಿದೊಡನೆ ತೀವ್ರ ಆಘಾತಕ್ಕೊಳಗಾಗಿ ರೋದಿಸು ತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ತೀವ್ರ ಹೃದಯಾಘಾತದಿಂದ ಪರಶುರಾಂ ಸಾವನ್ನಪ್ಪಿದ್ದಾರೆಂದು ಕೆ.ಆರ್.ಆಸ್ಪತ್ರೆ ವೈದ್ಯರು ಪ್ರಕಟಿಸಿದ ಹಿನ್ನೆಲೆಯಲ್ಲಿ ಮಂಡಿ ಠಾಣೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ದೇಹ ಒಪ್ಪಿಸಿದರು. ಪರಶುರಾಂ ಅವರು ತಂದೆ-ತಾಯಿ, ಓರ್ವ ಸಹೋದರ, ಓರ್ವ ಸಹೋದರಿ, ಸ್ನೇಹಿತರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ವಿಷಯ ತಿಳಿದ ಅವರ ಸ್ನೇಹಿತರು ಹಾಗೂ ಬಂಧುಗಳು ಶವಾಗಾರದ ಬಳಿ ಅಪಾರ ಸಂಖ್ಯೆಯಲ್ಲಿ ಧಾವಿಸಿ, ರೋದಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಮಂಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »