ಮೈಸೂರು, ಜು.18(ಪಿಎಂ)- ಸ್ವಾತಂತ್ರ್ಯ ಪೂರ್ವದಲ್ಲೇ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದ ಕೀರ್ತಿ ಜಯಚಾಮರಾಜ ಒಡೆ ಯರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸ್ಮರಿಸಿದರು.
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ದಲ್ಲಿ ಕರ್ನಾಟಕ ರಾಜ್ಯ ಅರಸು ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀಮನ್ ಮಹಾರಾಜ ವಾಗ್ಗೇಯಕಾರ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಾಬ್ಧಿ 2019-2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಬಳಿಕ ನೆಹರು ಸರ್ಕಾರ ಪಂಚವಾರ್ಷಿಕ ಯೋಜನೆ ಜಾರಿಗೆ ತಂದಿತು. ಅದಕ್ಕಿಂತಲೂ ಮುಂಚೆಯೇ ಮೈಸೂರು ಸಂಸ್ಥಾನದಲ್ಲಿ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿ ಜಯಚಾಮ ರಾಜ ಒಡೆಯರ್ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದರು. ದೇಶ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಜಯ ಚಾಮ ರಾಜ ಒಡೆಯರ್, ತಮ್ಮ 21ನೇ ವರ್ಷಕ್ಕೆ ರಾಜರಾಗಿ ಜವಾಬ್ದಾರಿ ವಹಿಸಿ ಕೊಂಡರು. ರಾಜನಾದವನಿಗೆ ವಿಶಾಲ ಹೃದಯವಿದ್ದರೆ ಮಾತ್ರವೇ ಉತ್ತಮ ಆಡಳಿತ ನಡೆಸಲು ಸಾಧ್ಯ ಎಂಬುದನ್ನು ಅರಿತಿದ್ದ ಅವರು, ಅದರಂತೆಯೇ ಉತ್ತಮ ಆಡಳಿತ ನೀಡಿ ದರು ಎಂದು ಹೇಳಿದರು.
ಮೈಸೂರು ಅರಸರು ರಾಜಪ್ರಭುತ್ವ ದಲ್ಲೇ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ `ರಾಜರ್ಷಿ’ ಬಿರುದನ್ನು ನೀಡಿ ಗಾಂಧೀಜಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ನಾಲ್ವಡಿ ಯವರು ಶೋಷಿತರಿಗೆ ಮೀಸಲಾತಿ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದರು. ಹಳೆ ಮೈಸೂರು ಭಾಗದ ದೀನ-ದಲಿತರು ಇಂದು ಘನತೆ -ಗೌರವದಿಂದ ಬದುಕುತ್ತಿದ್ದರೆ. ಅದಕ್ಕೆ ಅವರ ಕೊಡುಗೆಯೂ ಅಪಾರವಾಗಿದೆ ಎಂದು ನುಡಿದರು.
ಹೈದ್ರಾಬಾದ್ ನಿಜಾಮರು, ಉತ್ತರ ಭಾರತದಲ್ಲಿ ಮೊಘಲರು ಆಳ್ವಿಕೆ ನಡೆಸಿ ದ್ದಾರೆ. ಆ ಪ್ರದೇಶಗಳಿಗೆ ಹೋಲಿಸಿ ದರೆ ಒಡೆಯರ ಆಳ್ವಿಕೆಯಲ್ಲಿದ್ದ ಹಳೇ ಮೈಸೂರು ಪ್ರಾಂತ್ಯದ ಬೆಳವಣಿಗೆ ಅಪಾರವಾಗಿದೆ. ನಮ್ಮಂತಹ ರಾಜಕಾರಣಿಗಳಿಗೆ ಮೈಸೂರು ಅರಸರು ಆದರ್ಶಪ್ರಾಯರಾಗಿದ್ದು, ಜನಪ್ರತಿ ನಿಧಿಗಳು ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ. ನಂಜರಾಜೇ ಅರಸು, ಶ್ರೀರಾಮಸೇವಾ ಅರಸು ಮಂಡಳಿ ಅಧ್ಯಕ್ಷ ಲಕ್ಷ್ಮೀಕಾಂತ್ ರಾಜೇ ಅರಸು ಮತ್ತಿತರರು ಹಾಜರಿದ್ದರು.