ಮೈಸೂರು, ಜು.27(ಪಿಎಂ)- ಕರ್ನಾ ಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಅಸೋಸಿಯೇಷನ್ (ಕೆಎಎ ಸಿಎ) ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ಹಿರಿಯ ಕ್ರಿಕೆಟ್ಪಟು ಜಾವಗಲ್ ಶ್ರೀನಾಥ್ ಶನಿವಾರ ಚಾಲನೆ ನೀಡಿದರು.
ಮೈಸೂರಿನ ಮಾನಂದವಾಡಿ ರಸ್ತೆಯ ರೈಲ್ವೆ ವರ್ಕ್ಶಾಪ್ ಮೈದಾನದಲ್ಲಿ ಆಯೋ ಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಪಾರಿ ವಾಳ ಹಾರಿ ಬಿಟ್ಟು ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದ ಜಾವಗಲ್ ಶ್ರೀನಾಥ್, ಪುರೋಹಿತರು ಹಾಗೂ ಜ್ಯೋತಿಷಿಗಳು ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ಸಂತಸದ ವಿಚಾರ. ನಮ್ಮ ತಾತನವರು ಸಹ ಜ್ಯೋತಿಷಿಯಾಗಿ ದ್ದವರು. ಶ್ರದ್ಧೆಯಿಂದ ಪಂದ್ಯದಲ್ಲಿ ಪಾಲ್ಗೊಳ್ಳಿ. ಕ್ರೀಡೆ ಎಂಬುದು ನಮ್ಮಲ್ಲಿ ಏಕತೆ, ಸಾಮರಸ್ಯ ಹಾಗೂ ಸಮಾನತೆ ಮನೋ ಭಾವ ಬೆಳೆಸುತ್ತದೆ. ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ರೀಡಾ ಸ್ಫೂರ್ತಿ ಮೆರೆಯಿರಿ ಎಂದು ಸಲಹೆ ನೀಡಿದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರ ಶೇಖರ ಶಿವಾಚಾರ್ಯ ಸ್ವಾಮೀಜಿ ಮಾತ ನಾಡಿ, ಕ್ರೀಡೆಯ ಮೂಲಕ ಸ್ನೇಹ ಸಂಪಾ ದಿಸಬಹುದು. ಹೀಗಾಗಿ ಕ್ರೀಡಾ ಚಟುವಟಿಕೆ ನಮಗೆ ಅಗತ್ಯ. ಗಂಟೆ-ಪಂಚಾಂಗ ಹಿಡಿ ಯುತ್ತಿದ್ದ ಕೈಗಳಲ್ಲಿ ಇಂದು ಬ್ಯಾಟ್-ಬಾಲು ಬಂದಿದ್ದು, ಬದ್ಧತೆಯಿಂದ ಆಟವಾಡಿ, ಇದೇ ಗುಂಗಲ್ಲಿ ಗಂಟೆ-ಪಂಚಾಂಗ ಮಾತ್ರ ಮರೆಯಬೇಡಿ ಎಂದು ಕಚಗುಳಿ ಇಟ್ಟರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರ ಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕ್ರೀಡೆಗಳು ನಮ್ಮಲ್ಲಿ ಪ್ರೀತಿ-ವಿಶ್ವಾಸ ಹಾಗೂ ಸ್ನೇಹ ಬೆಳೆಸು ತ್ತವೆ. ಕ್ರಿಕೆಟ್ ಮೂಲಕ ಪುರೋಹಿತರು ಹಾಗೂ ಜ್ಯೋತಿಷಿಗಳ ಉತ್ತಮ ಸಂಘ ಟನೆ ಮಾಡಿದ್ದೀರಿ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
ಇದೇ ವೇಳೆ ಕೆಎಎಸಿಎ ಲಾಂಛನವನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಬಿಡುಗಡೆ ಮಾಡಿದರು. ಅಲ್ಲದೆ, ಸುತ್ತೂರು ಪಂಚಾಂಗ ಕರ್ತ ಡಾ.ಕೆ.ಜಿ.ಪುಟ್ಟ ಹೊನ್ನಯ್ಯ `ವಿಶ್ವ ವೀರಗಾಸೆ ಪುರವಂತರ ಒಕ್ಕೂಟ’ವನ್ನು ಒಕ್ಕೂಟದ ಬ್ಯಾನರ್ ಅನಾವರಣಗೊಳಿ ಸುವ ಮೂಲಕ ಉದ್ಘಾಟಿಸಿದರು. ಜೊತೆಗೆ ಪಂದ್ಯಾವಳಿಯ `ಟೈಸ್ ಬೋರ್ಡ್’ ಅನ್ನೂ ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ವಿವಿಧ ವೀರಗಾಸೆ ತಂಡಗಳು ನೃತ್ಯ ಪ್ರದ ರ್ಶನ ನೀಡಿ ಮನಸೂರೆಗೊಳಿಸಿದವು. ಬಳಿಕ ನಡೆದ ಕೆಎಎಸಿಎ ಮತ್ತು ಪತ್ರಕರ್ತರ ಸಂಘದ ನಡುವಿನ ಸ್ನೇಹಪೂರ್ವಕ ಉದ್ಘಾಟನಾ ಪಂದ್ಯದಲ್ಲಿ ಪತ್ರಕರ್ತರ ಸಂಘದ ತಂಡ ಜಯ ಗಳಿಸಿತು.
ತಂಡಗಳು: 8 ಓವರ್ಗಳಲ್ಲಿ ಪಂದ್ಯ ಗಳು ನಡೆಯಲಿದ್ದು, ಮೈಸೂರಿನ 5 ತಂಡಗಳು ಸೇರಿದಂತೆ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಒಟ್ಟು 16 ತಂಡಗಳು ಪಾಲ್ಗೊಂಡಿವೆ. ಮೈಸೂರಿನ ಪಾಠಶಾಲೆ ಸೀನಿಯರ್ಸ್, ಅಗಸ್ತ್ಯ ಕ್ರಿಕೆಟರ್ಸ್, ಪಾಠಶಾಲೆ ಪಂಡಿತರು, ಶೈವಾಸ್ ಕ್ರಿಕೆಟರ್ಸ್, ಮೈಸೂರು ರೈಡರ್ಸ್, ಕೋಲಾರ ಗೋಲ್ಡನ್ ಬಾಯ್ಸ್, ಚಿಂತಾಮಣಿಯ ಗಂಗೋತ್ರಿ ಕ್ರಿಕೆಟರ್ಸ್, ರಾಯಚೂರಿನ ವಾಯುಪುತ್ರ ಕ್ರಿಕೆಟರ್ಸ್, ಬೆಂಗಳೂರಿನ ಎಂವಿಎಂ ಕ್ರಿಕೆಟರ್ಸ್, ಬಳ್ಳಾರಿಯ ಶ್ರೀ ಗುರು ಕೊಟ್ಟೂರೇಶ್ವರ ಕ್ರಿಕೆಟ್ ತಂಡ, ಶಿವಮೊಗ್ಗ ಯುವ ಪುರೋಹಿತರ ಕ್ರಿಕೆಟ್ ತಂಡ, ಹಾಸನದ ಹಾಸನಾಂಬ ಕ್ರಿಕೆಟರ್ಸ್, ಬಂಡೀಪುರ ಟೈಗರ್ಸ್, ಬನ್ನೂರಿನ ಆದಿಶಕ್ತಿ ಕ್ರಿಕೆಟರ್ಸ್, ಮಂಡ್ಯದ ಮಾಂಡವ್ಯ ಕ್ರಿಕೆಟರ್ಸ್ ಹಾಗೂ ಬೆಳಗಾವಿಯ ಅಮರನಾಥ ಗುರುಕುಲ ತಂಡಗಳು ಪಾಲ್ಗೊಂಡಿವೆ.
ಕುಪ್ಪೂರು ಸುಕ್ಷೇತ್ರ ಗದ್ದಿಗೆಯ ಡಾ.ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಉದ್ಯಮಿ ಹಾಗೂ ವೀರಗಾಸೆ ಕಲಾವಿದೆ ಹೇಮಲತಾ ಚಿದಾನಂದ, ಕೆಎಎಸಿಎ ಅಧ್ಯಕ್ಷ ಡಾ.ಮೂಗೂರು ಮಧುದೀಕ್ಷಿತ್ ಗುರೂಜಿ ಮತ್ತಿತರರು ಹಾಜರಿದ್ದರು.