ಮುಂಗಾರು ಫಸಲಿಗೆ ನಾಲೆಗಳಿಗೆ ನೀರು ಹರಿಸಿ, ಕೆರೆ ಕಟ್ಟೆಗಳನ್ನು ತುಂಬಿಸಲು ಆಗ್ರಹ
ಮೈಸೂರು

ಮುಂಗಾರು ಫಸಲಿಗೆ ನಾಲೆಗಳಿಗೆ ನೀರು ಹರಿಸಿ, ಕೆರೆ ಕಟ್ಟೆಗಳನ್ನು ತುಂಬಿಸಲು ಆಗ್ರಹ

August 2, 2019

ಮೈಸೂರು, ಆ.1 (ಆರ್‍ಕೆಬಿ)- ಮುಂಗಾರು ಫಸಲು ಬೆಳೆಯಲು ಮೈಸೂರು ಜಿಲ್ಲೆಯ ಎಲ್ಲಾ ನಾಲೆಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಮೈಸೂರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲಹಳ್ಳಿ-ರಾಮಾಪುರ ನಾಲೆ, ವರುಣಾ, ತಾರಕ ಮತ್ತು ಹಾರಂಗಿ ನಾಲೆಗಳಿಗೆ ನೀರು ಬಿಡಲು ಕೂಡಲೇ ತೀರ್ಮಾನ ಕೈಗೊಳ್ಳಬೇಕು. ಈ ವ್ಯಾಪ್ತಿಯ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು. ತಕ್ಷಣ ನೀರು ಬಿಡುಗಡೆ ಮಾಡುವಂತೆ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ರೈತಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತಸಂಘದ ರಾಜ್ಯ ಮುಖಂಡರಾದ ಎಂ.ಎಸ್. ಅಶ್ವತ್ಥನಾರಾಯಣ ರಾಜೇ ಅರಸ್, ಹೆಚ್.ಡಿ.ಲೋಕೇಶ್‍ರಾಜೇ ಅರಸ್, ಬನ್ನೂರು ಕೃಷ್ಣಪ್ಪ, ಪಿ.ಮರಂಕಯ್ಯ, ಸರಗೂರು ನಟರಾಜು ಇನ್ನಿತರರು ಭಾಗವಹಿಸಿದ್ದರು.

Translate »