ಬೆಂಗಳೂರು, ಆ.3-ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ಪೀಕರಿಸಿ, ನಂತರ ವಿಶ್ವಾಸಮತ ಪಡೆದು 10 ದಿನ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ, ಏಕವ್ಯಕ್ತಿ ಸರ್ಕಾರ, ಸರ್ವಾಧಿಕಾರಿ ಸರ್ಕಾರವೆಂಬ ಆರೋಪಕ್ಕೆ ಗುರಿಯಾಗಿದ್ದು, ನಡುವೆ ಆಗಸ್ಟ್ 10 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಆಗಸ್ಟ್ 5ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ಚರ್ಚೆ ನಡೆಸಿ ಸಂಪುಟಕ್ಕೆ ಸೇರು ವವರ ಪಟ್ಟಿಗೆ ಅನುಮತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಮುರಳೀ ಧರ ರಾವ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಈಗಾಗಲೇ ಸಲ್ಲಿಸಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳಲಿ ರುವ ಯಡಿಯೂರಪ್ಪ ಮತ್ತೊಂದು ಪಟ್ಟಿ ಸಿದ್ಧಪಡಿ ಸಿದ್ದು, ಅದನ್ನು ಸಹ ಪಕ್ಷದ ವರಿಷ್ಠರಿಗೆ ನೀಡಲಿದ್ದಾರೆ. ಸಂಪುಟ ರಚನೆ ಬಗ್ಗೆ ಎಚ್ಚರಿಕೆ ವಹಿಸಿರುವ ಹೈಕಮಾಂಡ್ ಸಚಿವಾಕಾಂಕ್ಷಿಗಳ ವಿದ್ಯಾರ್ಹತೆ, ಅವರ ಮೇಲಿರುವ ಗಂಭೀರ ಆರೋಪಗಳು, ಜಾತಿ, ಪಕ್ಷ ನಿಷ್ಠೆ, ವೈಯಕ್ತಿಕ ಸಾಮಾರ್ಥ್ಯದ ಮಾನದಂಡಗಳನ್ನು ಆಧರಿಸಿ ಸಚಿವ ಸ್ಥಾನ ಹಂಚಿಕೆ ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಕಳೆದ ಬಾರಿ ಮಂತ್ರಿಗಳಾಗಿದ್ದ ಬಹುತೇಕ ಶಾಸಕರಿಗೆ ಈ ಸಲ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ. ಜೊತೆಗೆ ಹೊಸಬರು, ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುವವರು, ಪಕ್ಷ ಹಾಗೂ ಸರ್ಕಾರ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲಂತಹ ಶಾಸಕರಿಗೆ ಮೊದಲ ಆದ್ಯತೆ ನೀಡುವ ಸಂಭವ ಹೆಚ್ಚಾಗಿದೆ. ಹೀಗಾಗಿ ಹೊಸ ಮುಖಗಳು ಮಂತ್ರಿಮಂಡಲಕ್ಕೆ ಸೇರುವ ನಿರೀಕ್ಷೆ ಹೆಚ್ಚಾಗಿದೆ. ಮೈತ್ರಿ ಸರ್ಕಾರ ಪತನ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿದ ಅನರ್ಹ ಶಾಸಕರಿಗೆ ಸಚಿವಸ್ಥಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈ ಮೊದಲೇ ನೀಡಿದ್ದರು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಉಚ್ಛಾಟಿತ ಶಾಸಕರ ಪ್ರಕರಣದ ಬಗ್ಗೆ ಆ.10 ರಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ತೀರ್ಪು ನೋಡಿ ಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಯಡಿಯೂರಪ್ಪ ನಿರ್ಧರಿಸಿದಂತಿದೆ.
ರಾಜ್ಯ ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡಿ ತೃಪ್ತಿಪಡಿಸುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ವರಿಷ್ಠರು ತೀರ್ಮಾನಿಸಿದ್ದಾರೆ. ಇದೇ ಉದ್ದೇಶಕ್ಕಾಗಿ ಹಲವು ಹಿರಿಯ ನಾಯಕರಿಗೆ ಪದತ್ಯಾಗಕ್ಕೆ ಸಿದ್ದರಾಗುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾಹಿತಿ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಚಿವ ಸಂಪುಟ ರಚನೆಗೆ ಒಪ್ಪಿಗೆ ಸೂಚಿಸಿದ್ದು, ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ದಿನ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಮುಖ್ಯಮಂತ್ರಿಗಳು, ಸಚಿವ ಸಂಪುಟ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ರಾಜ್ಯಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಸಂಪುಟ ರಚನೆಯಾಗಿ, ಎರಡನೇ ಹಂತಗಳಲ್ಲಿ ಸಣ್ಣ ಪ್ರಮಾಣದಲ್ಲಿ ವಿಸ್ತರಣೆ ಮಾಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ. ಮೊದಲ ಹಂತದಲ್ಲಿ ಕನಿಷ್ಟ 12 ರಿಂದ 15 ಸಚಿವರು ಪದಗ್ರಹಣ ಮಾಡಲಿದ್ದು, ಉಳಿದ 15ಕ್ಕೂ ಹೆಚ್ಚು ಶಾಸಕರು ಎರಡನೇ ಹಂತದ ವಿಸ್ತರಣೆಯಲ್ಲಿ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ. ಒಂದು ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹ ಶಾಸಕರ ವಿರುದ್ಧ ತೀರ್ಪು ಬಂದರೆ ಬಿಜೆಪಿ ಸರ್ಕಾರದ ಮತ್ತಷ್ಟು ಶಾಸಕರು ಸಚಿವ ಸ್ಥಾನ ಪಡೆಯಲು ಅವಕಾಶ ಸಿಗಬಹುದು. ಶಾಸಕರ ಪರವಾಗಿ ತೀರ್ಪು ಬಂದರೆ ಆಗಸ್ಟ್ ತಿಂಗಳಾಂತ್ಯಕ್ಕೆ ಅನರ್ಹ ಶಾಸಕರಲ್ಲಿ ಕೆಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.