ಬೈಕ್ ಕದಿಯುತ್ತಿದ್ದ ಯುವಕ ಬಂಧನ: 11 ಬೈಕ್ ವಶ
ಮೈಸೂರು

ಬೈಕ್ ಕದಿಯುತ್ತಿದ್ದ ಯುವಕ ಬಂಧನ: 11 ಬೈಕ್ ವಶ

January 18, 2020

ಮೈಸೂರು, ಜ.17(ಎಸ್‍ಬಿಡಿ)- ಸುಲಭವಾಗಿ ಹಣ ಸಂಪಾದಿಸಲೆಂದು ಬೈಕ್ ಕಳ್ಳತನ ರೂಢಿಸಿಕೊಂಡಿದ್ದ ಯುವಕನನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿ, 11 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ನಗರ ತಾಲೂಕು, ಲಕ್ಷ್ಮೀಪುರ ಗ್ರಾಮದ ಮಹದೇವ(22) ಬಂಧಿತ ಬೈಕ್ ಕಳ್ಳ. ಈತ ಮೈಸೂರಿನ ಹೂಟಗಳ್ಳಿ ಎಸ್‍ಆರ್‍ಎಸ್ ಕಾಲೋನಿಯಲ್ಲಿ ಪೊಲೀಸ ರಿಗೆ ಸಿಕ್ಕಿಬಿದ್ದಿದ್ದಾನೆ. ಯುವಕನೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಮಹದೇವ ನನ್ನು ತಡೆದು ನಿಲ್ಲಿಸಿ, ವಿಚಾರಣೆ ನಡೆಸಿದ್ದಾರೆ. ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ತೋರಿಸದ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರ ಗೊಳಿಸಿದ್ದರಿಂದ ಅದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಕಳ್ಳತನ ಮಾಡಿದ್ದ ಬೈಕ್ ಎಂದು ತಿಳಿದಿದೆ.

ಬಳಿಕ ಮಹದೇವನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಿದಾಗ ಮೈಸೂರು ನಗರ, ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದು ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಪಿ ನೀಡಿದ ಮಾಹಿತಿ ಮೇರೆಗೆ ಕಳ್ಳತನ ಮಾಡಿದ್ದ 11 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಮೈಸೂರಿನ ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ 1, ಕೆ.ಆರ್. ನಗರ ಠಾಣೆಯ 1, ಪಿರಿಯಾಪಟ್ಟಣ ಠಾಣೆಯ 1, ಬೆಂಗಳೂರು ವಿಜಯನಗರ ಠಾಣೆಯ 1 ಪ್ರಕರಣ ಪತ್ತೆಯಾಗಿದ್ದು, ಇನ್ನುಳಿದ 7 ಬೈಕ್‍ಗಳ ವಾರಸುದಾರರು ಪತ್ತೆಯಾಗಬೇಕಾಗಿದೆ.

ಮೆಕ್ಯಾನಿಕ್‍ನಿಂದ ಕಲಿತಿದ್ದ: ಪಿಯುಸಿಗೆ ಓದು ನಿಲ್ಲಿಸಿದ ಮಹದೇವ, ಗ್ರಾಮದಲ್ಲಿದ್ದ ಮೆಕ್ಯಾನಿಕ್‍ನಿಂದ ದ್ವಿಚಕ್ರ ವಾಹನದ ಲಾಕ್ ತೆಗೆಯುವುದು ಹೇಗೆ? ಎಂಬುದನ್ನು ಕಲಿತುಕೊಂಡಿದ್ದ. ಕೀ ಕಳೆದುಹೋದ ಸಂದರ್ಭದಲ್ಲಿ ಸಹಾಯ ವಾಗಲಿ ಎಂಬ ಕಾರಣಕ್ಕೆ ಆ ಮೆಕ್ಯಾನಿಕ್, ಲಾಕ್ ತೆಗೆಯುವು ದನ್ನು ಹೇಳಿಕೊಟ್ಟಿದ್ದರು. ಆದರೆ ಅದನ್ನು ಕರಗತ ಮಾಡಿ ಕೊಂಡಿದ್ದ ಮಹದೇವ, ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ. ಈಗಲೂ ಆತ ಬೆಂಗಳೂರಿನ ಹೋಟೆಲ್‍ವೊಂದ ರಲ್ಲಿ ಕೆಲಸ ಮಾಡಿಕೊಂಡಿದ್ದ. ಮನೆಯಲ್ಲಿ ಬಡತನವಿದ್ದ ರಿಂದ ಶೋಕಿ ಮಾಡಲು ಹಣ ಸಂಪಾದಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ. ಈ ದುಷ್ಕøತ್ಯಕ್ಕೆ ಸ್ನೇಹಿತ ಅರವಿಂದ ಕೈ ಜೋಡಿಸಿದ್ದು, ಆತನ ಬಂಧನಕ್ಕೂ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ಅಡವಿಡುತ್ತಿದ್ದರು: ಮಾರಾಟ ಮಾಡಿದರೆ ಸಿಕ್ಕಿಬೀಳಬ ಹುದು ಎಂಬ ಕಾರಣಕ್ಕೆ ಕದ್ದ ದ್ವಿಚಕ್ರ ವಾಹನಗಳನ್ನು ಅಡವಿಡುತ್ತಿದ್ದರು. ಅದಕ್ಕೂ ವಾಹನದ ದಾಖಲೆಗಳನ್ನು ಕೇಳಬಹುದೆಂದು ಪಿರಿಯಾಪಟ್ಟಣ, ಮಿರ್ಲೆ ಇನ್ನಿತರ ಗ್ರಾಮಾಂತರ ಪ್ರದೇಶಕ್ಕೆ ವಾಹನಗಳನ್ನು ತೆಗೆದುಕೊಂಡು ಹೋಗಿ, `ಇದು ಸೀಜ್ ಮಾಡಿರುವ ಗಾಡಿ’ ಎಂದು ಹೇಳಿ, ಕೇವಲ ಐದಾರು ಸಾವಿರಕ್ಕೆ ಅಡವಿಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಡಿಸಿಪಿಗಳಾದ ಎಂ.ಮುತ್ತುರಾಜು ಹಾಗೂ ಬಿ.ಟಿ. ಕವಿತ ಸೂಚನೆ, ಸಿಸಿಬಿ ಎಸಿಪಿ ಮರಿಯಪ್ಪ ಮಾರ್ಗದರ್ಶನ, ಸಿಸಿಬಿ ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್ ನೇತೃತ್ವದಲ್ಲಿ ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿ ನಾಗುಬಾಯಿ, ಅಲೆಗ್ಸಾಂಡರ್, ಸಿ.ಚಿಕ್ಕಣ್ಣ, ರಾಮಸ್ವಾಮಿ, ಎಂ.ಆರ್. ಗಣೇಶ್, ಶಿವರಾಜು, ಲಕ್ಷ್ಮಿಕಾಂತ, ಪ್ರಸಾದ್, ಅಸ್ಗರ್, ಅನಿಲ್, ಆನಂದ್, ಪುಷ್ಪ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Translate »