ಬೆಂಗಳೂರು, ಜ.18- ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿರುವ `ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ದೇಶದ ವಿವಿಧ ಶಾಲೆಗಳಿಂದ ಆಯ್ದ 2,000 ಹಾಗೂ ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿ ದ್ದಾರೆ. ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಜರುಗಲಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಪರೀಕ್ಷೆಯ ಭಯದಿಂದ ಪಾರು ಮಾಡುವಲ್ಲಿ ಈ ಕಾರ್ಯಕ್ರಮ ತಕ್ಕಮಟ್ಟಿಗೆ ಸಫಲವಾಗಿದೆ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಇರುವ ಆತಂಕ, ಭಯ ಇತ್ಯಾದಿ ಋಣಾತ್ಮಕ ಭಾವನೆಗಳನ್ನು ನೀಗಿಸಿ ಒತ್ತಡರಹಿತವಾಗಿ ಪರೀಕ್ಷಾ ಸವಾಲು ಎದುರಿಸುವ ಕೆಲ ವಿಧಾನಗಳನ್ನು ಪ್ರಧಾನಿ ಮೋದಿ ತಮ್ಮ ಅನುಭವದ ಆಧಾರದ ಮೇಲೆ ತಿಳಿಸಿಕೊಡುತ್ತಾರೆ. ಕರ್ನಾಟಕದಿಂದ 42 ವಿದ್ಯಾರ್ಥಿ ಗಳನ್ನು ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಮಾಡಲಾಗಿದೆ.
