ಮೈಸೂರು, ಜ.20(ಆರ್‍ಕೆಬಿ)- ಸ್ವಚ್ಛ ಮೈಸೂರು, ಸ್ವಚ್ಛ ಭಾರತ, ಪೆಟ್ರೋಲಿಯಂ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಜನಜಾಗೃತಿ ಮೂಡಿಸಲು ಭಾನುವಾರ ಮುಂಜಾನೆ ನೂರಾರು ಮಂದಿ `ಸಾಕ್ಷಂ-2020’ ಸೈಕ್ಲೋಥಾನ್ ನಡೆಸಿದರು.
ಮೈಸೂರು ಜಿಲ್ಲಾ ಸೈಕಲ್ ಅಸೋಸಿಯೇಷನ್, ಮೈಸೂರು ನಗರಪಾಲಿಕೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಆಯಿಲ್ ಇಂಡಸ್ಟ್ರೀಸ್ ಆಶ್ರಯದಲ್ಲಿ ನಡೆದ ಸೈಕ್ಲೋಥಾನ್‍ನಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಶಾಲಾ ಮಕ್ಕಳು ಭಾಗವಹಿಸಿ 5 ಕಿ.ಮೀ. ಸೈಕಲ್ ತುಳಿದು, ಪೆಟ್ರೋಲಿಯಂ ಉತ್ಪನ್ನಗಳ ಉಳಿತಾಯ ಹಾಗೂ ಸದ್ವಿನಿಯೋಗದಿಂದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಮಾಡುವ ಅಗತ್ಯದ ಬಗ್ಗೆ ಸಂದೇಶ ಸಾರಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಹಾನಗರಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ `ಸಾಕ್ಷಂ’ ಸೈಕ್ಲೋಥಾನ್‍ಗೆ ಚಾಲನೆ ನೀಡಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಬಿಪಿಸಿಲ್ ಮುಖ್ಯಸ್ಥ ಎನ್.ನಾರಾಯಣಸ್ವಾಮಿ, ಪ್ರಾದೇಶಿಕ ವ್ಯವಸ್ಥಾಪಕ (ಚಿಲ್ಲರೆ) ಗುನ್ನಾಜಿ ರಾವ್ ಇನ್ನಿತರರು ಉಪಸ್ಥಿತರಿದ್ದರು.