ಕೇಂದ್ರದ್ದು ತೇಪೆ ಹಚ್ಚುವ ಬಜೆಟ್: ಸಿದ್ದರಾಮಯ್ಯ ಅಣಕ
ಮೈಸೂರು

ಕೇಂದ್ರದ್ದು ತೇಪೆ ಹಚ್ಚುವ ಬಜೆಟ್: ಸಿದ್ದರಾಮಯ್ಯ ಅಣಕ

February 2, 2020

ಮೈಸೂರು, ಫೆ.1 (ಎಸ್‍ಬಿಡಿ)- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ `ಟಿಂಕರಿಂಗ್’ (ತೇಪೆ ಹಚ್ಚುವ) ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮೈಸೂರಿನ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, 2019-20ನೇ ಹಣಕಾಸು ವರ್ಷದಲ್ಲಿ 27 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದರು. ಈ ಬಾರಿ 30.47 ಲಕ್ಷ ಕೋಟಿ ರೂ.ಗಳಷ್ಟು ಭಾರೀ ಗಾತ್ರದ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಸಂಗ್ರಹ ಆಗದ ಕಾರಣ 14ನೇ ಹಣಕಾಸು ಆಯೋಗದ ಅನ್ವಯ ರಾಜ್ಯಗಳ ಪಾಲಿನ ತೆರಿಗೆ ಮೊತ್ತಕ್ಕೆ ಖೋತಾ ಆಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಶೇ.7, 8, 9ಕ್ಕೆ ಏರಿಕೆ ಯಾಗಿದ್ದ ಜಿಡಿಪಿ, ಈಗ ಶೇ.4.5ಕ್ಕೆ ಕುಸಿದಿದೆ. ಹೆಚ್ಚು ಸಾಲ ಮಾಡಬೇಕಾದ ದುಃಸ್ಥಿತಿ ಬಂದಿದೆ. ಮುಂದೆ ಶೇ.6ರಷ್ಟು ಜಿಡಿಪಿ ಗುರಿ ಸಾಧಿಸುವುದಾಗಿ ತಿಳಿಸಿದ್ದಾರೆ. ದೇಶದ ಆದಾಯ ವನ್ನು 5 ಟ್ರಿಲಿಯನ್ ಡಾಲರ್‍ವರೆಗೆ ತೆಗೆದುಕೊಂಡು ಹೋಗು ತ್ತೇವೆ ಎಂದಿದ್ದಾರೆ. ಆದರೆ ಆರ್ಥಿಕ ಶಿಸ್ತು ಇಲ್ಲದೇ ಇದೆಲ್ಲಾ ಅಸಾಧ್ಯ. ಇದೊಂದು ಟಿಂಕರಿಂಗ್ ಬಜೆಟ್ ಅಷ್ಟೇ. ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಪೂರ್ಣ ವಿಫಲ ರಾಗಿದ್ದಾರೆ ಎಂದು ತಿಳಿಸಿದರು.

ಸೇರಿದಂತೆ ಎಲ್ಲಾ ವಲಯದಲ್ಲಿ ಹಿಂಜರಿತವಾ ಗಿದೆ. 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ ಉದ್ಯೋ ಗಾಕಾಂಕ್ಷಿಗಳಿಗೆ ಪ್ರತೀ ಬಜೆಟ್ ನಿರಾಸೆ ಮೂಡಿಸಿದೆ. ಕೃಷಿಗೆ ಉತ್ತೇಜನ, ಆರ್ಥಿಕ ಸುಧಾರಣೆಗೆ ಪೂರಕ ಕಾರ್ಯಕ್ರಮ ಬಜೆಟ್‍ನಲ್ಲಿಲ್ಲ. ಈಗಲೇ ಸಾಲಗಾರ ದೇಶವಾಗಿದೆ. ಮತ್ತಷ್ಟು ಸಾಲ ಮಾಡಿ, ದೇಶವನ್ನು ದಿವಾಳಿ ಮಾಡುತ್ತಾರೆ. ಆರ್ಥಿಕ ತಜ್ಞರೂ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆ ಪಡೆಯುವುದಕ್ಕೂ ಸರ್ಕಾರ ಸಿದ್ಧವಿಲ್ಲ. ಬಂಡ ವಾಳ ಹೂಡಿಕೆ, ರಫ್ತು-ಆಮದು ಹೆಚ್ಚಾಗದಿದ್ದರೆ ಉದ್ಯೋಗ ಸೃಷ್ಟಿಯಾಗದು. ಜನರಲ್ಲಿ ಖರೀದಿ ಶಕ್ತಿ ಹೆಚ್ಚದಿದ್ದರೆ ಆರ್ಥಿಕ ಸುಧಾರಣೆ ಆಗುವುದಿಲ್ಲ ಎಂದು ವಿಶ್ಲೇಷಿಸಿದರು.

ಕೃಷಿ ಕ್ಷೇತ್ರವನ್ನು ಖಾಸಗಿ ಕಂಪನಿಗಳ ಹಿಡಿತಕ್ಕೆ ಕೊಡಲು ಹೊರಟಿದ್ದಾರೆ. ಕೃಷಿ ಅಭಿವೃದ್ಧಿಗೆ ಬಜೆಟ್‍ನಲ್ಲಿ ತಿಳಿಸಿರುವ 16ರಲ್ಲಿ 9 ಅಂಶಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ವಾಗುವಂತಿವೆ. ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಇದೆಲ್ಲಾ ಕೃಷಿ ವಲಯದ ಖಾಸಗೀಕರಣದ ಭಾಗವಾಗಿದೆ. ಎಲ್ಲಾ ರೈತರೂ ನೂರಾರು ಎಕರೆ ಜಮೀನು ಹೊಂದಿಲ್ಲ. ಒಂದೆರಡು ಎಕರೆ ಜಮೀನು ಇರುವ ಸಣ್ಣ ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆ ರೂಪಿಸಿಲ್ಲ. ಕೃಷಿ ಬೆಳವಣಿಗೆ ಶೇ.10ಕ್ಕಿಂತ ಹೆಚ್ಚಿದ್ದರೆ ರೈತರಿಗೆ ದುಪ್ಪಟ್ಟು ಆದಾಯ ನಿರೀಕ್ಷಿಸಬಹುದು. ಆದರೆ ಕೃಷಿ ಕ್ಷೇತ್ರದ ಪ್ರಗತಿ ಕೇವಲ ಶೇ.2.5ರಷ್ಟು ಇರುವಾಗ ಆದಾಯ ದುಪ್ಪಟ್ಟು ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ. ರೈತರ ಮೂಗಿಗೆ ತುಪ್ಪ ಸವರಿದ್ದಾರೆ. ಇನ್ನು ಕಿಸಾನ್ ಉಡಾನ್ ಯೋಜನೆ. ಯಾವ ಬೋರೇಗೌಡ ಕೃಷಿ ಉತ್ಪನ್ನಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುತ್ತ್ತಾನೆ. ಈ ಯೋಜನೆ ಅಂಬಾನಿ, ಅದಾನಿ ಅಂತಹವರಿಗೆ ಮಾತ್ರ ಎಂದು ಟೀಕಿಸಿದರು.

ರೈತರಿಗೆ 15 ಲಕ್ಷ ಕೋಟಿ ರೂ. ಸಾಲ ಸೌಲಭ್ಯ ನೀಡುತ್ತೇವೆ ಎಂದಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‍ನ ಒಂದೇ ಒಂದು ರೂ. ಕೃಷಿಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲಿಲ್ಲ. ಅವರಿಗೂ ಅರಿವಿಲ್ಲ. ತಜ್ಞರನ್ನೂ ಕೇಳುವುದಿಲ್ಲ. ನೀತಿ ಆಯೋಗ ನಾಮಕಾವಸ್ಥೆಗೆ ಇದೆ. ಸಿಎಎ ಹಾಗೂ ಎನ್‍ಆರ್‍ಸಿ ಜಾರಿ ಯಿಂದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ಬಂಡವಾಳ ಹೂಡಲು ಬರುವು ದಿಲ್ಲ ಎಂದು ಅಭಿಪ್ರಾಯಪಟ್ಟರು.

ತಾಳಿ ಮಾರಿದಂತೆ: ತುಂಬಾ ಕಷ್ಟ ಬಂದಾಗ ಮಾತ್ರ ತಾಳಿ ಮಾರೋದು. ಅದೇ ರೀತಿ ಕೇಂದ್ರ ಸರ್ಕಾರ ಕೊನೆಯದಾಗಿ ಎಲ್‍ಐಸಿ ಷೇರು ಮಾರಲು ಮುಂದಾಗಿದೆ. ಮೋದಿ ನೇತೃತ್ವ ದಲ್ಲಿ ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉಚಿತವಾಗಿ ಅಕ್ಕಿ ಕೊಡು ವುದು ಬಡವರ ಪರ ಯೋಜನೆ. ಇಂಥ ಯೋಜನೆ ಮುಂದು ವರೆಸಲು ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲ. 2 ಕೆಜಿ ಕಡಿತ ಮಾಡುತ್ತೇವೆ ಅಂತ ಸಚಿವೆ ಶಶಿಕಲಾ ಜೊಲ್ಲೆ ಕೈಲಿ ಯಡಿ ಯೂರಪ್ಪ ಹೇಳಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದು ದುಡ್ಡು ಉಳಿಸಿ ಏನ್ ಮಾಡ್ತಾರೆ. ಆಪರೇಷನ್ ಕಮಲ ಮಾಡೋಕಾ. ಒಬ್ಬ ಶಾಸಕರನ್ನ ಕರೆದೊಯ್ಯಲು 25 ಕೋಟಿ, ಎಲೆಕ್ಷನ್‍ಗೆ 35 ಕೋಟಿ ರೂ. ಕೊಟ್ಟಿದ್ರು. ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಇದನ್ನೆಲ್ಲಾ. ನೋಡಿದ ಮೇಲೂ ನಿರ್ಮಲಾ ಸೀತಾರಾಮನ್ ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡ್ತೀವಿ ಎನ್ನುತ್ತಾರೆ ಎಂದು ಛೇಡಿಸಿದರು.

ಮಾಜಿ ಶಾಸಕ ಹೆಚ್.ವಿಶ್ವನಾಥ್ ಪುಸ್ತಕ ಬರೆಯುತ್ತಾ ರೆಂಬ ಪ್ರಶ್ನೆಗೆ, “ಅವರು ದೊಡ್ಡ ಬರಹಗಾರರು ಬರೆಯಲಿ ಬಿಡಿ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ಮತ್ತಿತರ ಮುಖಂಡರು ಹಾಜರಿದ್ದರು

Translate »