ಮೈಸೂರು, ಫೆ.2- ವಿಜಯನಗರ ಸಾಮ್ರಾಜ್ಯ ವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಯತಿ ಮಹರ್ಷಿ ವ್ಯಾಸರಾಯರು ಜನಿಸಿದ, ಕನಕದಾಸ ರಂಥ ಸಂತ ಶ್ರೇಷ್ಠರು ನಡೆದಾಡಿದ ಚಾರಿತ್ರಿಕ ಮಹತ್ವ ಹೊಂದಿರುವ ಮತ್ತು ಅನೇಕ ಪುರಾಣೇತಿಹಾಸಿಕ ಘಟನೆಗಳಿಗೆ ಸಾಕ್ಷಿಗಲ್ಲಿನಂತಿರುವ ಬನ್ನೂರಿನ ಸ್ಥಳ ಮಹಿಮೆ ಬಹು ವಿಶಿಷ್ಟವಾದದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ರೋಟರಿ ಕ್ಲಬ್ ಆಫ್ ಬನ್ನೂರು ಚಾರಿಟಬಲ್ ಟ್ರಸ್ಟ್ನ ರೋಟರಿ ಶಾಲಾ ವಾರ್ಷಿಕೋತ್ಸವ ಸಮಾ ರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾ ಟಿಸಿ ಮಾತನಾಡಿದ ಅವರು, ಅನೇಕ ಮಹಾತ್ಮರು, ಮಹನೀಯರು ಈ ನೆಲದಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧಕರಾಗಿ ರಾಜ್ಯ ಮಾತ್ರ ವಲ್ಲದೆ ದೇಶವ್ಯಾಪಿ ಹೆಸರಾಗಿ ಚರಿತ್ರೆ ಬರೆದಿದ್ದಾರೆ. ಇಂತಹ ಮಹತ್ವ ಪೂರ್ಣ ಸ್ಥಳದಲ್ಲಿ ಜನಿಸಿರುವುದಕ್ಕೆ ಇಲ್ಲಿನವರು ಹೆಮ್ಮೆ ಪಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುವಂತೆ ಇತಿಹಾಸವನ್ನು ತಿಳಿಯ ದವರು ಇತಿಹಾಸವನ್ನು ನಿರ್ಮಿಸಲಾರರು. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿದಿಸೆಯಿಂದಲೇ ತಮ್ಮ ಜನ್ಮ ಭೂಮಿಯಿಂದ ಹಿಡಿದು ಜಗತ್ತಿನ ಉದ್ದಗಲಕ್ಕೂ ಪ್ರತಿಯೊಂದನ್ನೂ ಸಂಶೋಧಕ ಕಣ್ಣಿನಿಂದ ನೋಡಿ ಎಲ್ಲದರ ಇತಿಹಾಸವನ್ನೂ ತಿಳಿಯಬೇಕೆಂದರು.
ರೋಟರಿ ಶಾಲೆಯ ಅಧ್ಯಕ್ಷ ಬಿ.ಸಿ.ಪಾರ್ಥಸಾರಥಿ, ಸ್ವಾಗತಿಸಿದರು. ಮುಖ್ಯಶಿಕ್ಷಕ ಬಿ.ಎನ್.ಸಿದ್ದು ಶಾಲೆಯ ಸಾಧನೆಯೊಡನೆ ವಾರ್ಷಿಕ ವರದಿ ಮಂಡಿಸಿದರು. ಕಾರ್ಯದರ್ಶಿ ವೈ.ಹೆಚ್.ಹನುಮಂತೇಗೌಡ, ಶಿಕ್ಷಣ ಸಂಯೋಜಕ ಕೆ.ಎಸ್.ಪರಮೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಸ್.ಜಯರಾಮೇಗೌಡ, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಹಾಯಕ ರಾಜ್ಯಪಾಲ ಯೋಗೇಂದ್ರ, ಮಹೇಂದ್ರಸಿಂಗ್ ಕಾಳಪ್ಪ, ಬಿ.ಎನ್.ಸುರೇಶ್, ಪಿ. ಪ್ರಭಾಕರ್, ವೆಂಕಟೇಶ್, ಕೆಂಪೇಗೌಡ ಮುಂತಾ ದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರುವ ಮೂಲತಃ ಬನ್ನೂರಿನವರೇ ಆದ ಬನ್ನೂರು ರಾಜು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.