ಮೈಸೂರು,ಜ.17(ಆರ್‍ಕೆ)- ಕೆಎಸ್‍ಆರ್‍ಟಿಸಿ ಬಸ್ಸಿನ ಕ್ಯಾರಿಯರ್‍ನಲ್ಲಿರಿಸಿದ್ದ 2.7 ಲಕ್ಷ ರೂ. ಬೆಲೆಬಾಳುವ 89 ಗ್ರಾಂ ಚಿನ್ನಾಭರಣಗಳಿದ್ದ ಪ್ರಯಾಣಿಕರ ಬ್ಯಾಗ್ ಕಳವಾಗಿ ರುವ ಘಟನೆ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಮಡಿಕೇರಿಯ ಪ್ರೇಮಾ ಎಂಬುವರೇ ಆಭರಣವಿದ್ದ ಬ್ಯಾಗ್ ಕಳೆದುಕೊಂಡ ಪ್ರಯಾಣಿಕರು. ಜನವರಿ 16ರಂದು ಬೆಳಿಗ್ಗೆ 8.10 ಗಂಟೆ ವೇಳೆಗೆ ರಾಮನಗರದಿಂದ ಮಡಿಕೇರಿಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್ಸಿಗೆ ಹತ್ತಿದ್ದ ಪ್ರೇಮಾ ಅವರು, ಬೆಳಿಗ್ಗೆ 10.15 ಗಂಟೆ ವೇಳೆಗೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದರು.
ಬಸ್ಸು 7ನೇ ಪ್ಲಾಟ್‍ಫಾರಂಗೆ ಬಂದು ನಿಂತಿತು. ಸ್ವಲ್ಪ ಸಮಯದ ನಂತರ ಬಸ್ಸಿನ ಕ್ಯಾರಿಯರ್‍ನಲ್ಲಿದ್ದ ಬ್ಯಾಗನ್ನು ನೋಡಿದಾಗ ಅದು ನಾಪತ್ತೆಯಾಗಿತ್ತು. ಬ್ಯಾಗ್‍ನಲ್ಲಿ 2.7 ಲಕ್ಷ ರೂ. ಬೆಲೆ ಬಾಳುವ ವಿವಿಧ ಮಾದರಿಯ ಚಿನ್ನದ ಆಭರಣಗಳಿದ್ದವು. ಬಸ್ ನಿಲ್ದಾಣದಲ್ಲಿ ಯಾರೋ ಅದನ್ನು ಕಳವು ಮಾಡಿದ್ದಾರೆ ಎಂದು ಪ್ರೇಮಾ ಅವರು ಲಷ್ಕರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಪೊಲೀಸರು ಮಹಜರು ನಡೆಸಿ ಬಸ್‍ಸ್ಟ್ಯಾಂಡ್‍ನಲ್ಲಿರುವ ಸಿಸಿ ಟಿವಿ ಕ್ಯಾಮರಾಗಳ ಫುಟೇಜ್ ಪಡೆದು ಆರೋಪಿ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.