ಚಾಲಕನಿಲ್ಲದೆ ಚಲಿಸಿದ ಕಾರು: 5 ವಾಹನ ಜಖಂ
ಮೈಸೂರು

ಚಾಲಕನಿಲ್ಲದೆ ಚಲಿಸಿದ ಕಾರು: 5 ವಾಹನ ಜಖಂ

August 5, 2018

ಮೈಸೂರು: ಚಾಲಕ, ಚಾಲನೆ ಮಾಡುವಾಗಲೇ ವಾಹನ ಅಪಘಾತಗಳು ಸಂಭವಿಸುವುದನ್ನು ನೋಡಿದ್ದೇವೆ. ಇಲ್ಲೊಂದು ವಿಶೇಷ, ಚಾಲಕ ರಹಿತ ಕಾರು ಚಲಿಸಿ ರಸ್ತೆ ಬದಿ ನಿಂತಿದ್ದ 4 ಕಾರು ಹಾಗೂ ಒಂದು ಬೈಕ್‍ಗೆ ಡಿಕ್ಕಿ ಹೊಡೆದು, ಅವು ಜಖಂಗೊಂಡಿರುವ ಘಟನೆ ಮೈಸೂರಿನ ವಿವಿ.ಪುರಂನ ನಿರ್ಮಲಾ ಕಾನ್ವೆಂಟ್ ಎದುರು ಸಂಭವಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾ ಪಾಯವಾಗಿಲ್ಲ. ಆದರೆ ನಿಸಾನ್, ಹೋಂಡಾ ಸಿಟಿ, ಟಾಟಾ ಇಂಡಿಕಾ ಕಾರು ಹಾಗೂ ಬೈಕ್‍ವೊಂದು ಜಖಂಗೊಂಡಿವೆ.

ವಿವಿ.ಪುರಂ ಠಾಣೆ ಕಡೆಯಿಂದ ಗೋಕುಲಂ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ನಿರ್ಮಲಾ ಕಾನ್ವೆಂಟ್ ಎದುರು ರಸ್ತೆ ಎಡಬದಿ ನಿಂತಿದ್ದ ಮಹಿಂದ್ರಾ ಎಕ್ಸ್‍ಯುವಿ ಕಾರು ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಇದ್ದಕ್ಕಿದ್ದಂತೆ, ಕಡಿದಾದ ರಸ್ತೆಯಲ್ಲಿ ಬಲಭಾಗಕ್ಕೆ ನುಗ್ಗಿ, ‘ಕಾರ್ಜ್ ಗೆಲಾಕ್ಸಿ’ ಹಳೇ ಕಾರುಗಳ ಶೋ ರೂಂ ಎದುರು ನಿಂತಿದ್ದ ಬೈಕು, ನಿಸಾನ್, ಟಾಟಾ ಇಂಡಿಕಾ ಹಾಗೂ ಹೊಂಡಾ ಸಿಟಿ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಸರಣಿ ಅಪಘಾತದಿಂದ ಹೋಂಡಾ ಸಿಟಿ ಕಾರಿನ ಬಾನೆಟ್ ಭಾಗ ಜಖಂಗೊಂ ಡಿದ್ದು, ಉಳಿದ ವಾಹನಗಳಿಗೂ ಲಘು ಹಾನಿ ಯಾಗಿದೆ. ನೋಡ ನೋಡುತ್ತಿದ್ದಂತೆಯೇ ನಿಂತಿದ್ದ ಕಾರು ಚಲಿಸಿ, ಸರಣಿ ಅಪಘಾತ ಸಂಭವಿಸುತ್ತಿ ದ್ದಂತೆಯೇ ಸಾರ್ವಜನಿಕರು ಓಡೋಡಿ, ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಚಾಲಕನೇ ಇರಲಿಲ್ಲ. ಕಿಟಕಿ ಗಾಜುಗಳೆಲ್ಲಾ ಬಂದ್ ಆಗಿದ್ದವು.

ವಿಷಯ ತಿಳಿದ ವಿವಿಪುರಂ ಸಂಚಾರ ಠಾಣೆ ಪೊಲೀಸರು, ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ದರು. ಡಿಕ್ಕಿ ಹೊಡೆದ ಕಾರು ಹ್ಯಾಂಡ್ ಬ್ರೇಕ್ ಹಾಕದೆ, ಗೇರಿನಲ್ಲೂ ಇಡದೇ ಇದ್ದುದ್ದೇ ಈ ಅನಾಹುತಕ್ಕೆ ಕಾರಣ ಎಂಬುದು ತಿಳಿಯಿತು.

ಬೈಕ್ ಮಾಲೀಕ, ತೆಗೆದುಕೊಂಡು ಹೋದರೆ, ಜಖಂಗೊಂಡಿರುವ ಕಾರುಗಳ ಮಾಲೀಕರು ಸ್ಥಳದಲ್ಲೇ ವಾಹನ ನಿಲ್ಲಿಸಿ, ಕಾಯುತ್ತಿದ್ದರು. ಕೊನೆಗೆ ಸ್ಥಳಕ್ಕೆ ಬಂದ ಮಾಲೀಕ, ಕಾರ್ಜ್ ಗೆಲಾಕ್ಸಿ ಶೋರೂಂ ವಶದಲ್ಲಿದ್ದು, ಜಖಂಗೊಂಡಿರುವ ಕಾರುಗಳನ್ನು ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದರಿಂದ ಪ್ರಕರಣ ರಾಜಿಯಲ್ಲಿ ಅಂತ್ಯಗೊಂಡಿದೆ. ಸದಾ ವಾಹನ ದಟ್ಟಣೆ ಇರುವ ಈ ರಸ್ತೆ ಯಲ್ಲಿ ಈ ವೇಳೆ ಬೇರೆ ವಾಹನಗಳು ಅಡ್ಡ ಬಾರದಿರುವುದು ಹಾಗೂ ಶಾಲಾ ಮಕ್ಕಳೂ ಈ ವೇಳೆ ಇಲ್ಲಿ ಇರದಿದ್ದರಿಂದ ಸಂಭವಿಸಬಹುದಾದ ಭಾರೀ ಅಪಾಯ ತಪ್ಪಿದಂತಾಗಿದೆ.

Translate »