ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರ್ಪಡೆ: ಕೊಂಗಳ್ಳಿ ಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ನಿಷೇಧ
ಚಾಮರಾಜನಗರ

ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರ್ಪಡೆ: ಕೊಂಗಳ್ಳಿ ಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ನಿಷೇಧ

August 5, 2018

ಚಾಮರಾಜನಗರ:  ಕನ್ನಡಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದ ತಮಿಳುನಾಡಿಗೆ ಸೇರಿರುವ ತಾಳವಾಡಿ ಸಮೀಪದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯಲ್ಲಿ (ಕೊಂಗಳ್ಳಿ ಬೆಟ್ಟ) ಇನ್ನೂ ಮುಂದೆ ಭಕ್ತಾಧಿಗಳು ವಾಸ್ತವ್ಯ ಇರುವಂತಿಲ್ಲ!

ಕೊಂಗಳ್ಳಿ ಬೆಟ್ಟ ಪ್ರದೇಶವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಅರಣ್ಯ ಇಲಾಖೆ ಕಳೆದ 1 ವಾರದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ಭಕ್ತರನ್ನು ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಉಳಿದುಕೊಳ್ಳಲು ಅವಕಾಶ ನೀಡುತ್ತಿಲ್ಲ. ಮಾಮೂಲಿಯಂತೆ ರಾತ್ರಿ ವಾಸ್ತವ್ಯ ಹೂಡಲು ಬರುವ ಭಕ್ತರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿ ಇರುವ ತಮ್ಮಟಗೇರಿ ಬಳಿ ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಇದು ಭಕ್ತಾಧಿಗಳ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ಕೊಂಗಳ್ಳಿ ಬೆಟ್ಟದ ಪ್ರದೇಶವು ಹುಲಿ ಸಂರಕ್ಷಣಾಲಯಕ್ಕೆ ಒಳಪಟ್ಟಿದೆ. ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಈ ಕಾರಣಕ್ಕಾಗಿ ದೇವಸ್ಥಾನದಲ್ಲಾಗಲೀ, ಆವರಣದಲ್ಲಾಗಲೀ ಅಥವಾ ವಸತಿ ಗೃಹಗಳಲ್ಲಾಗಲೀ ಯಾರೊಬ್ಬರು ರಾತ್ರಿ ವೇಳೆ ವಾಸ್ತವ್ಯ ಹೂಡುವಂತಿಲ್ಲ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಇದೆ ಎಂದು ಅರಣ್ಯ ಇಲಾಖೆ ಅಳವಡಿಸಿರುವ ನಾಮಫಲಕದಲ್ಲಿ ತಿಳಿಸಲಾಗಿದೆ.

ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಕಾಡಿನ ದಾರಿಯಲ್ಲಿ ಬರುವುದರಿಂದ ದ್ವಿಚಕ್ರ ವಾಹನಕ್ಕೆ 20ರೂ., ನಾಲ್ಕು ಚಕ್ರ ವಾಹನಕ್ಕೆ 50 ರೂ. ಶುಲ್ಕ ನಿಗಧಿಗೊಳಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಪ್ಲಾಸ್ಟಿಕ್ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಬಾರದಂತೆ ಮನವಿ ಮಾಡಲಾಗಿದೆ.

ದೇವಸ್ಥಾನದ ಮುಂಭಾಗದಲ್ಲಿ ಇರುವ ಅಂಗಡಿಗಳು, ಹೋಟೆಲ್‍ಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ತೆಗೆಯಬೇಕು ಎಂದು ಮಾಲೀಕರಿಗೆ ಸೂಚಿಸಿರುವ ಅರಣ್ಯ ಇಲಾಖೆ, ಸಾರ್ವಜನಿಕರು ದೇವಸ್ಥಾನದ ಆವರಣ ಬಿಟ್ಟು ಪಕ್ಕದಲ್ಲಿ ಇರುವ ಕಾಡಿಗೆ ಹಾಗೂ ಕೆರೆ ಬಳಿಗೆ ಹೋಗದಂತೆ ನಿಷೇಧಿಸಲಾಗಿದೆ. ಅರಣ್ಯ ಇಲಾಖೆ ಹೊರಡಿಸಿರುವ ಈ ಆದೇಶವನ್ನು ಕಳೆದ 1 ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.

ಕೊಂಗಳ್ಳಿ ಬೆಟ್ಟ ತಮಿಳುನಾಡಿಗೆ ಸೇರಿದ್ದರೂ ಸಹ ಅಲ್ಲಿಗೆ ಭೇಟಿ ನೀಡುತ್ತಿದ್ದ ಸಹಸ್ರಾರು ಭಕ್ತರು ಕನ್ನಡಿಗರು, ಹಳೇ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಜನರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಕಾರ್ತಿಕ ಮಾಸ, ಶ್ರಾವಣ ಮಾಸ, ಅಮಾವಾಸ್ಯೆ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. ಇದೇ ಗ್ರಾಮದ ಜನರೇ ದೇವಸ್ಥಾನಕ್ಕೆ ಆಗಮಿಸುತ್ತಿದ್ದದ್ದು ವಿಶೇಷವಾಗಿತ್ತು. ಈ ವೇಳೆ ರಾತ್ರಿ ವೇಳೆ ವಾಸ್ತವ್ಯ ಇರುತ್ತಿದ್ದರು. ಸಂಜೆ ವೇಳೆ ಹುಲಿ ವಾಹನ ಉತ್ಸವ, ಬೆಳಗಿನ ಸಮಯ ವಿಶೇಷ ಪೂಜೆ ಹಾಗೂ ಅನ್ನ ದಾಸೋಹವನ್ನು ಏರ್ಪಡಿಸುತ್ತಿದ್ದರು. ಬೆಟ್ಟಕ್ಕೆ ಭಕ್ತಾಧಿಗಳು ಭೇಟಿ ನೀಡುತ್ತಿದ್ದ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿತ್ತು. ಹೀಗಾಗಿ ಈ ಭಾಗದಲ್ಲಿ ಕೊಂಗಳ್ಳಿ ಬೆಟ್ಟ ಬಹಳ ಪ್ರಸಿದ್ಧ ಹೊಂದಿತ್ತು. ತಮಿಳುನಾಡಿನ ಅರಣ್ಯ ಇಲಾಖೆಯ ಈ ನಿರ್ಧಾರದಿಂದ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ನಿರಾಶೆ ಉಂಟು ಮಾಡಿದೆ.

ಕೊಂಗಳ್ಳಿ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ಅಲ್ಲಿ ವಾಸ್ತವ್ಯ ಹೂಡಿ, ಪೂಜೆ, ಅನ್ನ ದಾಸೋಹ ಆಯೋಜಿಸುತ್ತಾ ಭಕ್ತಿ ಸಮರ್ಪಿಸುತ್ತಿದ್ದರು. ಆದರೆ, ಅರಣ್ಯ ಇಲಾಖೆ ಬೆಟ್ಟದ ಪ್ರದೇಶವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂಬ ಕಾರಣ ನೀಡಿ ರಾತ್ರಿ ವೇಳೆ ಸಾರ್ವಜನಿಕರ ಹಾಗೂ ಭಕ್ತರ ವಾಸ್ತವ್ಯವನ್ನು ನಿಷೇಧಿಸಿದೆ. ಇದು ಭಕ್ತರಿಗೆ ಅನಾನುಕೂಲ ಉಂಟುಮಾಡಿರುವುದಲ್ಲದೇ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. – ಶ್ರೀಸದಾಶಿವ ಸ್ವಾಮೀಜಿ, ಕೊಂಗಳ್ಳಿ ದಾಸೋಹ ಮಠ, ಕೊಂಗಳ್ಳಿ ಬೆಟ್ಟ.

Translate »