ಶಾಲೆಯಲ್ಲಿ ಕುಕ್ಕರ್ ಸಿಡಿದು ಬಾಲಕಿಗೆ ಗಾಯ
ಚಾಮರಾಜನಗರ

ಶಾಲೆಯಲ್ಲಿ ಕುಕ್ಕರ್ ಸಿಡಿದು ಬಾಲಕಿಗೆ ಗಾಯ

August 5, 2018

ಕೊಳ್ಳೇಗಾಲ: ಬಿಸಿಯೂಟ ತಯಾರಿಸಿಟ್ಟಿದ್ದ ಕುಕ್ಕರ್ ಸಿಡಿದು ಬಾಲಕಿಯೊಬ್ಬಳಿಗೆ ಗಾಯವಾಗಿರುವ ಘಟನೆ ಹನೂರು ಶೈಕ್ಷಣಿಕ ವಲಯದ ಕೆ.ಗುಂಡಾಪುರ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ ಗಾಯಗೊಂಡವರು.

ಶಾಲೆಯ ಅಡುಗೆಮನೆ ಕೊಠಡಿಯಲ್ಲಿ ಸಿಬ್ಬಂದಿ ಅಡುಗೆ ತಯಾರಿಸಿಟ್ಟಿದ್ದರು. ಈ ವೇಳೆ ವಿದ್ಯಾರ್ಥಿನಿ ರಾಜೇಶ್ವರಿ ಅಡುಗೆ ಮನೆ ಕೊಠಡಿಗೆ ಬಂದು ಅದೇ ತಾನೆ ಬಿಸಿಯೂಟ ತಯಾರಿಸಿಟ್ಟಿದ್ದ ಕುಕ್ಕರ್‍ನ ಮುಚ್ಚಳವನ್ನು ತೆಗೆದಿದ್ದರಿಂದ ಘಟನೆ ಸಂಭವಿಸಿದೆ. ಇದರಿಂದ ಬಾಲಕಿಯ ಕೈ, ಕಾಲುಗಳಿಗೆ ಗಾಯವಾಗಿದ್ದು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತರಗತಿಯಿಂದ ಹೊರಬಂದ ಬಾಲಕಿಗೆ ಯಾರೋ ಅಡುಗೆ ಮನೆಯಲ್ಲಿರುವ ಕುಕ್ಕರ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ, ಆಕೆ ಅಡುಗೆ ಮನೆಗೆ ಹೋಗಿ ಆಗತಾನೆ ಅಡುಗೆ ಮಾಡಿಟ್ಟಿದ್ದ ಕುಕ್ಕರ್ ಮುಚ್ಚಳ ತೆಗೆದಿದ್ದಾಳೆ ಎನ್ನಲಾಗಿದೆ.

ಗಾಯಗೊಂಡಿದ್ದ ಬಾಲಕಿಯನ್ನು ಪೋಷಕರು ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಘಟನೆ ಬೆಳಕಿಗೆ ಬಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.

ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಶಾಲೆಯ ಅಡುಗೆ ಕೊಠಡಿಗೆ ಮಕ್ಕಳನ್ನು ಕಳುಹಿಸಬಾರದು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ, ಶಾಲೆಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಬಾಲಕಿಯನ್ನು ಅಡುಗೆ ಕೊಠಡಿಗೆ ಹೋಗಲು ಹೇಗೆ ಅವಕಾಶ ಮಾಡಿಕೊಟ್ಟರು ಎಂದು ಕಾರಣ ಕೇಳಿ ಶಾಲೆಯ ಮುಖ್ಯ ಶಿಕ್ಷಕರು ಸೇರಿ ಐವರು ಶಿಕ್ಷಕರಿಗೆ ನೋಟೀಸ್ ನೀಡಲಾಗಿದ್ದು, ಇದಕ್ಕೆ ಉತ್ತರ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Translate »