ನಕಲಿ ಐಪಿಎಸ್ ಅಧಿಕಾರಿ ಜೈಲಿಗೆ
ಮೈಸೂರು

ನಕಲಿ ಐಪಿಎಸ್ ಅಧಿಕಾರಿ ಜೈಲಿಗೆ

April 22, 2019

ಮೈಸೂರು: ಇನ್ಸ್‍ಪೆಕ್ಟರ್ ಯಾಮಾರಿಸಲು ಮುಂದಾಗಿದ್ದ ಮೈಸೂರಿನ ನಕಲಿ ಐಪಿಎಸ್ ಅಧಿಕಾರಿಯನ್ನು ಕೆ.ಆರ್. ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೈಸೂರಿನ ವಿಜಯನಗರ 3ನೇ ಹಂತ, 3ನೇ ಮೇನ್, ಎ-ಬ್ಲಾಕ್ ನಿವಾಸಿ ಲೇಟ್ ನಿಜಲಿಂಗಪ್ಪ ಅವರ ಮಗ ಸಿ.ಎನ್. ದಿಲೀಪ್ (35) ಎಂಬುವನೇ ಐಪಿಎಸ್ ಅಧಿಕಾರಿ ಸೋಗಿನಲ್ಲಿ ಪೊಲೀಸ್ ಕಾರು ವ್ಯವಸ್ಥೆ ಮಾಡುವಂತೆ ದುಂಬಾಲು ಬಿದ್ದು ಸಿಕ್ಕಿರುವ ಆಸಾಮಿ. ಮಂಡ್ಯದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದಿ ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿಯಿಂದ ಬಿಇ ಪದವಿ ಪಡೆದಿರುವ ದಿಲೀಪ್ ಐಎಎಸ್ ಮಾಡಲು ಪ್ರಯತ್ನಿಸಿ ವಿಫಲ ನಾಗಿದ್ದ ಎನ್ನಲಾಗಿದೆ. ಏಪ್ರಿಲ್ 14ರಂದು ಸಂಜೆ 7 ಗಂಟೆ ವೇಳೆ ಕೆ.ಆರ್.ಪೊಲೀಸ್ ಠಾಣೆ ಲ್ಯಾಂಡ್‍ಲೈನ್‍ಗೆ ಫೋನ್ ಮಾಡಿದ ಆತ, ನಾನು ಐಪಿಎಸ್ ಅಧಿಕಾರಿ, ನಮ್ಮ ಕುಟುಂಬದವರು ಪ್ರವಾಸ ಕೈಗೊಂಡಿದ್ದಾರೆ. ಒಂದು ಟಯೋಟಾ ಇನೋವಾ ಎಸಿ ಕಾರ್ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದ.

ಫೋನ್ ಅಟೆಂಡ್ ಮಾಡಿದ್ದ ಸಬ್ ಇನ್ಸ್‍ಪೆಕ್ಟರ್ ಸುನಿಲ್, ಆ ವಿಷಯವನ್ನು ಇನ್ಸ್‍ಪೆಕ್ಟರ್ ವಿ.ನಾರಾಯಣಸ್ವಾಮಿ ಅವರ ಗಮನಕ್ಕೆ ತಂದರು. ನಂತರ ಮೊಬೈಲ್‍ಗೆ ಕರೆ ಮಾಡಿ ವಿಚಾರಿ ಸಿದ ಇನ್ಸ್‍ಪೆಕ್ಟರ್‍ಗೂ ತಾನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಎಂದು ಹೇಳಿ ಏಪ್ರಿಲ್ 19ಕ್ಕೆ ಕಾರು ವ್ಯವಸ್ಥೆ ಮಾಡಿ ವಿಜಯನಗರ 3ನೇ ಹಂತದ ತಮ್ಮ
ಮನೆಗೆ ಕಳುಹಿಸಿ ಎಂದು ದರ್ಪದಲ್ಲೇ ಕೇಳಿದ್ದ. ತದನಂತರವೂ ಮತ್ತೆ ಮತ್ತೆ ಫೋನ್ ಮಾಡಿ `ಗಾಡಿ ಅರೇಂಜ್ ಆಯ್ತಾ, ಆಗಿದ್ದರೆ ಕಾರಿನ ನಂಬರ್, ಡ್ರೈವರ್, ಮೊಬೈಲ್ ನಂಬರ್ ಅಪ್‍ಡೇಟ್ ಮಾಡಿ’ ಎಂದು ಪೊಲೀಸ್ ಅಧಿಕಾರಿ ಶೈಲಿಯಲ್ಲೇ ಹೇಳುತ್ತಿದ್ದ. ಮತ್ತೆ ಏಪ್ರಿಲ್ 18ರಂದು `ಗಾಡಿ ಬರುತ್ತೋ ಇಲ್ವೋ ಹೇಳ್ರೀ. ಬಾಡಿಗೆ ಮತ್ತು ಡ್ರೈವರ್ ಬ್ಯಾಟಾನೂ ನೀವೇ ವ್ಯವಸ್ಥೆ ಮಾಡಿ’ ಎಂದು ದಿಲೀಪ್ ದರ್ಪದಿಂದಲೇ ಹೇಳಿದ್ದ.

ಚುನಾವಣಾ ಕರ್ತವ್ಯದಲ್ಲಿದ್ದ ಇನ್ಸ್‍ಪೆಕ್ಟರ್‍ಗೆ ಆತನ ಒತ್ತಡ ಹೆಚ್ಚಾಗಿದ್ದಲ್ಲದೆ, ಆತ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಸ್ವಲ್ಪ ಸಂಶಯ ಬಂದಿತ್ತು. ಅದನ್ನು ದೃಢಪಡಿಸಿಕೊಳ್ಳಲು ದಿಲೀಪ್‍ಗೆ ಕರೆ ಮಾಡಿ, `ಸಾರ್ ಕಾರು ಅರೇಂಜ್ ಆಗಿದೆ. ತಾವು ಯಾವ ವರ್ಷದಲ್ಲಿ ಐಪಿಎಸ್ ಮಾಡಿದ್ದೀರಿ ಮಾಹಿತಿ ನೀಡಿ’ ಎಂದು ನಯವಾಗಿಯೇ ಕೇಳಿದ್ದರು. `2019ರ ಜನವರಿ 1ರ ಅಧಿಸೂಚನೆಯ ಕ್ರಮ ಸಂಖ್ಯೆ 144ರಲ್ಲಿ 759ನೇ ರ್ಯಾಂಕ್ ನಲ್ಲಿದೆ ನೋಡಿ’ ಎಂದು ದಿಲೀಪ್ ಮಾಹಿತಿ ನೀಡಿದ್ದ. ತಕ್ಷಣ ಮಿನಿಸ್ಟ್ರಿ ಆಫ್ ಹೋಂ ಅಫೇರ್ಸ್ ಅಧಿಸೂಚನೆಯನ್ನು ಇಂಟರ್‍ನೆಟ್‍ನಿಂದ ಡೌನ್‍ಲೋಡ್ ಮಾಡಿದಾಗ ಅದರಲ್ಲಿ 144 ಕ್ರಮ ಸಂಖ್ಯೆಯಲ್ಲಿ ರಾಜಸ್ಥಾನ ಹೋಂ ಟೌನ್‍ನ ಕೇರಳಾ ಕೇಡರ್‍ನ ಪದಮ್ ಸಿಂಗ್ 759ನೇ ರ್ಯಾಂಕ್ ಐಎಎಸ್ ಪ್ರೊಬೇಷನರಿ ಎಂದಿದ್ದುದು ತಿಳಿಯಿತು.

ಆತ ನಕಲಿ ಅಧಿಕಾರಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಬಲೆಗೆ ಬೀಳಿಸಲು ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಉಪಾಯ ಮಾಡಿದರು. ತಕ್ಷಣ ಇಬ್ಬರು ಕಾನ್ ಸ್ಟೇಬಲ್‍ಗಳನ್ನು ಆತನ ಮನೆ ಬಳಿಗೆ ಕಳುಹಿಸಿ ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಿದಾಗ ಆತ ಬಿಇ ಗ್ರಾಜುಯೇಟ್, ಅಮ್ಮ, ತಂಗಿಯೊಂದಿಗೆ ವಾಸ ಮಾಡುತ್ತಿದ್ದು, ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ವಿಷಯ ತಿಳಿಯಿತು.

ನಿನ್ನೆ (ಏ.20) ಮಧ್ಯಾಹ್ನ ಟೀಂ ರೆಡಿ ಮಾಡಿಕೊಂಡು ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗಲೂ, ಕೇಂದ್ರ ಗೃಹ ಇಲಾಖೆಯ ಅಧಿಸೂಚನೆ ಯನ್ನು ಡೌನ್‍ಲೋಡ್ ಮಾಡಿಕೊಂಡಿದ್ದ ದಿಲೀಪ್, ಪಿಡಿಎಫ್‍ನಲ್ಲಿ ಕ್ರಮ ಸಂಖ್ಯೆ 144ರಲ್ಲಿ ತನ್ನ ಹೆಸರು ಸೇರಿಸಿಕೊಂಡು ಅದೇ ಪ್ರತಿಯನ್ನು ತೋರಿಸಿ ತಾನು ಐಪಿಎಸ್ ಅಧಿಕಾರಿ ಎಂದು ಏಮಾರಿಸುತ್ತಿದ್ದ ಎಂಬುದು ತಿಳಿಯಿತು. ಐಪಿಸಿ ಸೆಕ್ಷನ್ 175, 420 ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡ ಕೆ.ಆರ್. ಠಾಣೆ ಇನ್ಸ್‍ಪೆಕ್ಟರ್ ವಿ.ನಾರಾ ಯಣಸ್ವಾಮಿ ಅವರು ದಿಲೀಪ್‍ನನ್ನು ಬಂಧಿಸಿ ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

Translate »